ತನ್ನ ತಾಯಿಗಾಗಿ ಸಮಯ ಮೀಸಲಿಡುವುದು, ಹಣ ಖರ್ಚು ಮಾಡುವುದು ಕೌಟುಂಬಿಕ ಹಿಂಸೆಯಲ್ಲ: ಪತಿ ವಿರುದ್ಧ ಮಹಿಳೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಾಲಯ

Update: 2024-02-14 11:52 GMT

ಸಾಂದರ್ಭಿಕ ಚಿತ್ರ 

ಮುಂಬೈ: ಪುರುಷನೊಬ್ಬ ತನ್ನ ತಾಯಿಗಾಗಿ ಸಮಯ ಮೀಸಲಿಡುವುದು ಹಾಗೂ ಹಣ ಖರ್ಚು ಮಾಡುವುದನ್ನು ಕೌಟುಂಬಿಕ ಹಿಂಸೆ ಎಂದು ಪರಿಗಣಿಸಲಾಗದು ಎಂದು ಹೇಳಿದ ಮುಂಬೈನ ಸೆಷನ್ಸ್‌ ನ್ಯಾಯಾಲಯ, ಮಹಿಳೆಯೊಬ್ಬಳು ತನ್ನ ಗಂಡ ಹಾಗೂ ಅತ್ತೆ ಮಾವಂದಿರ ವಿರುದ್ಧ ನೀಡಿದ ದೂರಿಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದೆ.

ಪ್ರತಿವಾದಿಗಳ ವಿರುದ್ಧದ ಆರೋಪಗಳಲ್ಲಿ ಸ್ಪಷ್ಟತೆಯಿಲ್ಲ ಮತ್ತು ಗೊಂದಲಕಾರಿಯಾಗಿದೆ ಹಾಗೂ ಅವರು ಅರ್ಜಿದಾರೆಗೆ ಕೌಟುಂಬಿಕ ಹಿಂಸೆ ನೀಡಿದ್ದಾರೆಂದು ಸಾಬೀತುಪಡಿಸಲು ಏನೂ ಇಲ್ಲ ಎಂದು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಆಶಿಷ್‌ ಅಯಚಿತ್‌ ಹೇಳಿದರು.

ಕೌಟುಂಬಿಕ ಹಿಂಸೆಯಾಗಿದೆ ಎಂದು ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣೆ ಕಾಯಿದೆಯಡಿ ರಾಜ್ಯ ಸೆಕ್ರಟೇರಿಯಟ್‌ ಉದ್ಯೋಗಿಯಾಗಿರುವ ಮಹಿಳೆ ದೂರು ಸಲ್ಲಿಸಿ ರಕ್ಷಣ, ಪರಿಹಾರಕ್ಕೆ ಬೇಡಿಕೆಯಿರಿಸಿದ್ದರು.

ವಿವಾಹದ ಸಂದರ್ಭ ಪತಿ ತಾಯಿಯ ಮಾನಸಿಕ ಅಸ್ವಸ್ಥೆ ವಿಚಾರವನ್ನು ಮರೆಮಾಚಿದ್ದರು ಎಂದು ದೂರುದಾರೆ ಆರೋಪಿಸಿದ್ದರಲ್ಲದೆ ಅತ್ತೆ ತಾನು ಉದ್ಯೋಗಕ್ಕೆ ಹೋಗುವುದಕ್ಕೆ ವಿರುದ್ಧವಾಗಿದ್ದರು ಹಾಗೂ ತನಗೆ ಕಿರುಕುಳ ನೀಡುತ್ತಿದ್ದರು ಎಂದೂ ದೂರಿದ್ದರು.

ಮಹಿಳೆಯ ಪತಿ ಸೆಪ್ಟೆಂಬರ್‌ 1993ರಿಂದ ಡಿಸೆಂಬರ್‌ 2024ರವರೆಗೆ ವಿದೇಶದಲ್ಲಿದ್ದರು ಹಾಗೂ ಪ್ರತಿ ವರ್ಷ ತಾಯಿಗೆ ರೂ 10,000 ವ್ಯಯಿಸುತ್ತಿದ್ದರು ಅವರ ಕಣ್ಣಿನ ಶಸ್ತ್ರಕ್ರಿಯೆಗೂ ಹಣ ವ್ಯಯಿಸಿದ್ದರು ಎಂದು ಮಹಿಳೆ ದೂರಿದ್ದರು.

ಅತ್ತೆ ಮಾವಂದಿರು ಕಿರುಕುಳ ನೀಡುತ್ತಿದ್ದರು ಎಂದೂ ಆಕೆ ಆರೋಪಿಸಿದ್ದರೂ ಅವರು ಈ ಆರೋಪಗಳನ್ನೆಲ್ಲಾ ನಿರಾಕರಿಸಿದ್ದರು.

ತಾನು ಆಕೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದಾಗಿ ಮಹಿಳೆಯ ಪತಿ ತಿಳಿಸಿದ್ದಾರೆ ಹಾಗೂ ಆಕೆ ತನ್ನ ಎನ್‌ಆರ್‌ಇ ಖಾತೆಯಿಂದ ರೂ 21.68 ಲಕ್ಷ ವಿದ್‌ಡ್ರಾ ಮಾಡಿ ಯಾರಿಗೂ ಮಾಹಿತಿ ನೀಡದೆ ಆ ಹಣದಿಂದ ಫ್ಲ್ಯಾಟ್‌ ಖರೀದಿಸಿದ್ದಳು ಎಂದು ದೂರಿದ್ದರು.

ವಿಚಾರಣಾ ನ್ಯಾಯಾಲಯ ಆಕೆಗೆ ತಾತ್ಕಾಲಿಕವಾಗಿ ಮಾಸಿಕ ರೂ 3000 ಜೀವನಾಂಶ ನೀಡುವಂತೆ ಸೂಚಿಸಿತ್ತು. ನಂತರ ಆಕೆ ಸೆಷನ್ಸ್‌ ನ್ಯಾಯಾಲಯದಲ್ಲಿ ಅಪೀಲು ಸಲ್ಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News