ಹೈದರಾಬಾದ್ | 7 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ; ಇಬ್ಬರ ಬಂಧನ

Update: 2024-11-01 15:34 GMT

ಸಾಂದರ್ಭಿಕ ಚಿತ್ರ | PC: freepik.com

ಹೈದರಾಬಾದ್: ಬ್ಯಾಂಕಾಕ್‌ನಿಂದ ಇಲ್ಲಿನ ರಾಜೀವ್ ಗಾಂಧಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಬ್ಬರು ಪ್ರಯಾಣಿಕರಿಂದ 7 ಕೋಟಿ ರೂ. ಮೌಲ್ಯದ ಮಾದಕ ವಸ್ತುವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ವಶಪಡಿಸಿಕೊಂಡಿದೆ ಹಾಗೂ ಅವರನ್ನು ಬಂಧಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ನಿರ್ದಿಷ್ಟ ಮಾಹಿತಿಯ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಡಿಆರ್‌ಐ ಅಧಿಕಾರಿಗಳು ಇಬ್ಬರು ಭಾರತೀಯ ಪ್ರಯಾಣಿಕರಿಂದ 7.096 ಕಿ.ಗ್ರಾಂ. ನೀರಿನಲ್ಲಿ ಬೆಳೆಸಿದ ಗಾಂಜಾ ಗಿಡ (ಹೈಡ್ರೋಫೋನಿಕ್ ವೀಡ್)ಗಳನ್ನು ವಶಪಡಿಸಿಕೊಳ್ಳುವ ಮೂಲಕ ದೀಪಾವಳಿ ಸಂದರ್ಭದ ಮಾದಕ ವಸ್ತು ಸಾಗಾಟ ಜಾಲವನ್ನು ಬೇಧಿಸಿದ್ದಾರೆ.

ಈ ಮಾದಕ ವಸ್ತುವಿಗೆ ಅಕ್ರಮ ಮಾರುಕಟ್ಟೆಯಲ್ಲಿ 7 ಕೋಟಿ ರೂ. ಮೌಲ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾಂಕಾಕ್‌ನಿಂದ ಇಲ್ಲಿನ ರಾಜೀವ್ ಗಾಂಧಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭ ಇಬ್ಬರು ಭಾರತೀಯ ಪ್ರಯಾಣಿಕರನ್ನು ವಶಕ್ಕೆ ಪಡೆಯಲಾಯಿತು. ಅನಂತರ ಅವರ ಸರಂಜಾಮುಗಳನ್ನು ವ್ಯವಸ್ಥಿತವಾಗಿ ಶೋಧ ನಡೆಸಲಾಯಿತು. ಈ ಸಂದರ್ಭ ಅಧಿಕಾರಿಗಳು ‘ಕೆಲ್ಲೋಗ್ಸ್’ ಜೋಳದ ತಿನಿಸಿನ ಪ್ಯಾಕೇಟ್‌ನ ಒಳಗೆ ಮಾದಕ ದ್ರವ್ಯ ಒಳಗೊಂಡ 13 ಪಾರದರ್ಶಕ ಪ್ಯಾಕೆಟ್‌ಗಳು ಪತ್ತೆ ಹಚ್ಚಿದರು. ಮುದ್ದೆ ರೂಪದಲ್ಲಿದ್ದ ಹಸಿರು ಬಣ್ಣದ ಈ ವಸ್ತು ಎಲ್ಲಾ 13 ಪ್ಯಾಕೇಟ್‌ಗಳಲ್ಲಿ ಇದ್ದವು. ಇದನ್ನು ಪರಿಶೀಲಿಸಿದಾಗ ನೀರಿನಲ್ಲಿ ಬೆಳೆಸಿದ ಗಾಂಜಾ ಗಿಡ (ಹೈಡ್ರೋಫೋನಿಕ್ ವೀಡ್)ಎಂದು ತಿಳಿದು ಬಂತು.

7.096 ಕಿ.ಗ್ರಾಂ. ನೀರಿನಲ್ಲಿ ಬೆಳೆಸಿದ ಗಾಂಜಾ ಗಿಡ (ಹೈಡ್ರೋಫೋನಿಕ್ ವೀಡ್)ಗಳನ್ನು ಒಳಗೊಂಡ ಪ್ಯಾಕೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಎನ್‌ಡಿಪಿಎಸ್ ಕಾಯ್ದೆ, 1985ರ ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ. ಅನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ತೆಲಂಗಾಣದ ಮಾದಕ ವಸ್ತು ನಿಯಂತ್ರಣ ಬ್ಯುರೊ 155 ಗ್ರಾಂ. ಎಂಡಿಎಂಎಯನ್ನು ವಶಪಡಿಸಿಕೊಂಡಿದೆ ಹಾಗೂ ರಾಜಸ್ಥಾನ ಮೂಲದ ಸಾಗಾಟಗಾರನನ್ನು ಬಂಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News