ಇವಿಎಂ ಗಳನ್ನು ನಂಬುವುದಿಲ್ಲ ಎಂದು 2003ರಿಂದಲೂ ಹೇಳುತ್ತಿದ್ದೇನೆ : ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್
ಹೊಸದಿಲ್ಲಿ: ವಿದ್ಯುನ್ಮಾನ ಮತದಾನ ಯಂತ್ರ (ಇವಿಎಂ)ಗಳ ಬಗ್ಗೆ ಮತ್ತೆ ಪ್ರಶ್ನೆಗಳನ್ನೆತ್ತಿರುವ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು, ವಿವಿಪ್ಯಾಟ್ ಚೀಟಿಗಳನ್ನು ಮತದಾರರಿಗೆ ಹಸ್ತಾಂತರಿಸಬೇಕು ಮತ್ತು ಅವುಗಳನ್ನು ಮತಪೆಟ್ಟಿಗೆಗಳಲ್ಲಿ ಹಾಕಿಸಬೇಕು ಎಂದು ಆಗ್ರಹಿಸಿದ್ದಾರೆ.
ಚುನಾವಣೆಗಳಲ್ಲಿ ಇವಿಎಂ ಗಳ ಬಳಕೆಯ ಕುರಿತು ವೀಡಿಯೊವೊಂದರಲ್ಲಿ ಎತ್ತಲಾದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಸಿಂಗ್, ತಾನು ಇವಿಎಂ ಗಳನ್ನು ನಂಬುವುದಿಲ್ಲ ಎಂದು 2003ರಿಂದಲೂ ಹೇಳುತ್ತಿದ್ದೇನೆ ಎಂದಿದ್ದಾರೆ.
‘‘ನಾನು ನನಗೆ ಇಷ್ಟವಿದ್ದವರಿಗೆ ಮತ ಹಾಕಿದರೆ ಅದು ಯಾರಿಗೆ ಬಿದ್ದಿದೆ ಎನ್ನುವುದೂ ನನಗೆ ಗೊತ್ತಿಲ್ಲ. ಹ್ಯಾಕ್ ಮಾಡಲಾಗದ ಚಿಪ್ ಅಳವಡಿಸಿರುವ ಒಂದೂ ಯಂತ್ರವು ಈ ಪ್ರಪಂಚದಲ್ಲಿಲ್ಲ. ಚಿಪ್ ತನ್ನಲ್ಲಿ ಅಡಕವಾಗಿರುವ ಸಾಫ್ಟ್ವೇರ್ನ ಆದೇಶವನ್ನು ಅನುಸರಿಸುತ್ತದೆ. ನೀವು ‘ಎ ’ಎಂದು ಟೈಪಿಸಿದರೆ ಸಾಫ್ಟ್ವೇರ್ ‘ಎ’ ಎಂದು ಹೇಳುತ್ತದೆ ಮತ್ತು ‘ಎ’ ಮಾತ್ರ ಮುದ್ರಣಗೊಳ್ಳುತ್ತದೆ ’’ ಎಂದು ಹೇಳಿರುವ ಸಿಂಗ್,‘‘ನೀವು ಇವಿಎಂನಲ್ಲಿ ‘ಹಸ್ತ (ಕಾಂಗ್ರೆಸ್ ಚುನಾವಣಾ ಚಿಹ್ನೆ)’ವನ್ನು ಒತ್ತಿದರೆ ಮತ್ತು ಸಾಫ್ಟ್ವೇರ್ ‘ಕಮಲ’ ಎಂದು ಹೇಳಿದರೆ ಯಾವುದು ಮುದ್ರಣಗೊಳ್ಳುತ್ತದೆ? ಹಸ್ತ ಅಥವಾ ಕಮಲ? ಈಗ ವಿಷಯವೇನೆಂದರೆ ವಿವಿಪ್ಯಾಟ್ ಯಂತ್ರವು ನಿಮಗೆ ಏಳು ಸೆಕೆಂಡುಗಳ ಕಾಲ ಹಸ್ತವನ್ನು ತೋರಿಸುತ್ತದೆ ಮತ್ತು ನೀವು ಸಮಾಧಾನದಿಂದ ಹೊರಕ್ಕೆ ಬರುತ್ತೀರಿ. ಆದರೆ ಅಲ್ಲಿ ‘ಕಮಲ(ಬಿಜೆಪಿಯ ಚುನಾವಣ ಚಿಹ್ನೆ)’ ಮುದ್ರಣಗೊಳ್ಳುತ್ತದೆ. ಈ ಚಮತ್ಕಾರವನ್ನು ನೀವು ರಾಹುಲ್ ಮೆಹ್ತಾರ ವೀಡಿಯೊದಲ್ಲಿ ನೋಡಬಹುದು ’’ಎಂದು ತನ್ನ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಎಲ್ಲ ಅಭಿವೃದ್ಧಿ ಹೊಂದಿದ ದೇಶಗಳಂತೆ ಭಾರತದಲ್ಲಿಯೂ ಮತಪತ್ರಗಳ ಮೂಲಕವೇ ಚುನಾವಣೆಗಳನ್ನು ನಡೆಸಬೇಕು ಎನ್ನುವುದು ಪ್ರತಿಪಕ್ಷಗಳ ಆಗ್ರಹವಾಗಿದೆ ಎಂದು ಹೇಳಿರುವ ಅವರು,‘ಮತ ಎಣಿಕೆ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು, ತೆಗೆದುಕೊಳ್ಳಲಿ ಬಿಡಿ. ಆದರೆ ತಾವು ಬಯಸಿದ ವ್ಯಕ್ತಿಗೆ ತಮ್ಮ ಮತ ಸಿಕ್ಕಿದೆ ಎಂದು ಸಾರ್ವಜನಿಕರು ನಂಬುತ್ತಾರೆ. ಆದರೆ ಇಂದು ಅದು ಗೊತ್ತೂ ಆಗುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಚುನಾವಣಾ ಆಯೋಗ ಇವಿಎಂ ಗಳನ್ನು ಅಷ್ಟೊಂದು ಪ್ರೀತಿಸುತ್ತಾರಾದರೆ ಅವರೇಕೆ ವಿವಿಪ್ಯಾಟ್ ಸ್ಲಿಪ್ ಗಳನ್ನು ತೋರಿಸುವುದಿಲ್ಲ? ಅದನ್ನು ನಮಗೆ ಕೊಡಿ ಮತ್ತು ನಾವದನ್ನು ಮತಪೆಟ್ಟಿಗೆಯಲ್ಲಿ ಹಾಕುತ್ತೇವೆ ’ ಎಂದು ಹೇಳಿದ್ದಾರೆ.
ಇದಕ್ಕೇಕೆ ಆಕ್ಷೇಪ ಎಂದು ಪ್ರಶ್ನಿಸಿರುವ ಸಿಂಗ್,‘‘ಈ ಬೇಡಿಕೆಗಾಗಿ ಚುನಾವಣಾ ಆಯೋಗವನ್ನು ಭೇಟಿಯಾಗಲೂ ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಆಗಸ್ಟ್ ನಿಂದಲೂ ಸಮಯಾವಕಾಶವನ್ನು ಕೋರುತ್ತಿದೆ. ಆದರೆ ಆಯೋಗಕ್ಕೆ ಪುರುಸೊತ್ತು ಇಲ್ಲ. ಈಗ ನಮಗೆ ಯಾವ ಆಯ್ಕೆಯಿದೆ? ಒಂದೇ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಬೇಕು, ಇಲ್ಲವೇ ಇವಿಎಂ ಗಳ ವಿರುದ್ಧ ಬೀದಿಗಿಳಿಯಬೇಕು. ಇದನ್ನು ರಾಜಕೀಯ ಪಕ್ಷಗಳು, ವಿಶೇಷವಾಗಿ ‘ಇಂಡಿಯಾ’ ಶೀಘ್ರ ನಿರ್ಧರಿಸಬೇಕು ’’ ಎಂದಿದ್ದಾರೆ.