ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆ ತೇರ್ಗಡೆಗೊಂಡು ಐಎಎಸ್ ಅಧಿಕಾರಿಯಾದ ಸ್ಪೀಕರ್ ಓಂ ಬಿರ್ಲಾ ಪುತ್ರಿ ಅಂಜಲಿ
ಹೊಸದಿಲ್ಲಿ: ತಮ್ಮ ಮೊದಲ ಪ್ರಯತ್ನದಲ್ಲೇ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪ್ರಸ್ತುತ ರೈಲ್ವೆ ಸಚಿವಾಲಯದಲ್ಲಿ ಸೇವೆಯಲ್ಲಿರುವ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿ ಅಂಜಲಿ ಬಿರ್ಲಾ ಸಾಕಷ್ಟು ಸುದ್ದಿಯಲ್ಲಿದ್ದಾರೆ.
ಓಂ ಬಿರ್ಲಾ-ಅಮೃತಾ ಬಿರ್ಲಾ ದಂಪತಿಗೆ ಆಕಾಂಕ್ಷಾ ಮತ್ತು ಅಂಜಲಿ ಬಿರ್ಲಾ ಎಂಬ ಇಬ್ಬರು ಪುತ್ರಿಯರಿದ್ದಾರೆ. ಕಿರಿಯ ಪುತ್ರಿಯಾಗಿರುವ ಅಂಜಲಿ ಐಎಎಸ್ ಅಧಿಕಾರಿಯಾಗಿದ್ದಾರೆ.
ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆಗಸ್ಟ್ 2020ರಲ್ಲಿ ಬಿಡುಗಡೆಗೊಳಿಸಿದ್ದ ಮೀಸಲು ಪಟ್ಟಿಯಲ್ಲಿ ಅಂಜಲಿ ಬಿರ್ಲಾ ಅವರ ಹೆಸರು ಕೂಡ ಇತ್ತು. ಈ ಪಟ್ಟಿಯಲ್ಲಿ ಸಾಮಾನ್ಯ, ಒಬಿಸಿ, ಆರ್ಥಿಕ ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟಜಾತಿಗೆ ಸೇರಿದ ಹಲವು ವರ್ಗಗಳ 89 ಅಭ್ಯರ್ಥಿಗಳ ಹೆಸರುಗಳಿದ್ದವು.
ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಅಂಜಲಿ ಬಿರ್ಲಾ ಯಾವುದೇ ಪರೀಕ್ಷೆ ಅಥವಾ ಸಂದರ್ಶನಗಳಿಗೆ ಹಾಜರಾಗದೆ ಯುಪಿಎಸ್‌ಸಿ ಪರೀಕ್ಷೆ ತೇರ್ಗಡೆಯಾಗಿದ್ದಾರೆ, ತಂದೆಯ ಹುದ್ದೆಯ ಬಲದಿಂದ ಆಕೆಗೆ ಇದು ಸಾಧ್ಯವಾಗಿದೆ ಎಂಬರ್ಥದ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ತಾವು ಎಲ್ಲರಂತೆಯೇ ಪರೀಕ್ಷೆಗೆ ಹಾಜರಾಗಿ ಸೂಕ್ತ ಪ್ರಕ್ರಿಯೆಯಂತೆಯೇ ತೇರ್ಗಡೆಗೊಂಡಿದ್ದಾಗಿ ಅಂಜಲಿ ಬಿರ್ಲಾ ಸ್ಪಷ್ಟೀಕರಣ ನೀಡಿದ್ದರಲ್ಲದೆ The Quintಗೆ ತಮ್ಮ ಅಡ್ಮಿಟ್ ಕಾರ್ಡ್‌ನ ಒಂದು ಪ್ರತಿಯನ್ನೂ ನೀಡಿದ್ದಾರೆ. 2019 ಮೆರಿಟ್ ಪಟ್ಟಿಯಲ್ಲಿ ಆಕೆಯ ರೋಲ್ ನಂಬರ್ ಅನ್ನೂ ನಂತರ ಸುದ್ದಿ ಸಂಸ್ಥೆ ಪರಿಶೀಲಿಸಿದ್ದು ಆಕೆ ಪ್ರಿಲಿಮಿನರಿ ಮತ್ತು ಮೈನ್ ಪರೀಕ್ಷೆಗಳಿಗೆ ಹಾಜರಾಗಿದ್ದರೆಂದು ದೃಢಪಟ್ಟಿದೆ.
ಅಂಜಲಿ ಅವರು ಕೋಟಾದ ಸೋಫಿಯಾ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದು ದಿಲ್ಲಿಯ ರಾಮ್‌ಜಸ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರ (ಹಾನರ್ಸ್) ಶಿಕ್ಷಣ ಪಡೆದಿದ್ದರು. ಈ ಸಂದರ್ಭ ಆಕೆ ಯುಪಿಎಸ್‌ಸಿಗೆ ತಯಾರಿ ನಡೆಸಿ ನಂತರ ಮೊದಲ ಯತ್ನದಲ್ಲೇ ತೇರ್ಗಡೆಯಾಗಿದ್ದರು.
“ಸಮಾಜಕ್ಕಾಗಿ ಏನಾದರೂ ಕೊಡುಗೆ ನೀಡಬೇಕೆಂಬ ಉದ್ದೇಶದೊಂದಿಗೆ ಸಿವಿಲ್ ಸರ್ವಿಸ್ ಸೇರಲು ಬಯಸಿದ್ದೇನೆ. ದೇಶದ ಜನರಿಗಾಗಿ ನನ್ನ ತಂದೆಯ ಬದ್ಧತೆಯನ್ನು ನಾನು ಸದಾ ನೋಡಿದ್ದೇನೆ,” ಎಂದು ಅಂಜಲಿ ಹೇಳಿದ್ದಾರಲ್ಲದೆ ತಮಗೆ ಸದಾ ಮಾರ್ಗದರ್ಶನ ಮತ್ತು ಬೆಂಬಲ ನೀಡಿದ ಹಿರಿಯ ಸಹೋದರಿ ಆಕಾಂಕ್ಷಾ ಅವರನ್ನೂ ಶ್ಲಾಘಿಸಿದ್ದಾರೆ.