ಜಾಹೀರಾತುಗಳಿಗೆ ರೂ. 1,100 ಕೋಟಿ ಖರ್ಚು ಮಾಡಬಹುದಾದರೆ ಮೂಲಭೂತ ಸೌಕರ್ಯ ಯೋಜನೆಗಳಿಗೇಕಿಲ್ಲ: ದಿಲ್ಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ
“ಯೋಜನೆಗೆ ಅನುದಾನ ಒದಗಿಸಿ ಇಲ್ಲದೇ ಹೋದಲ್ಲಿ ಜಾಹೀರಾತು ವೆಚ್ಚವನ್ನು ನಾವು ಜಪ್ತಿ ಮಾಡುತ್ತೇವೆ,” ಎಂದು ಸರ್ಕಾರದ ಪರ ಹಾಜರಿದ್ದು ವಕೀಲ ಎ ಎಂ ಸಿಂಘ್ವಿ ಅವರಿಗೆ ನ್ಯಾಯಾಲಯ ಹೇಳಿದೆ.
ಹೊಸದಿಲ್ಲಿ: “ಕಳೆದ ಮೂರು ವರ್ಷಗಳಲ್ಲಿ ಜಾಹೀರಾತಿಗಾಗಿ ರೂ 1,100 ಕೋಟಿ ಖರ್ಚು ಮಾಡಬಹುದಾದರೆ ಮೂಲಭೂತ ಸೌಕರ್ಯ ಯೋಜನೆಗಳಿಗೂ ಅನುದಾನ ಒದಗಿಸಬಹುದಾಗಿದೆ,” ಎಂದು ದಿಲ್ಲಿ ಹೈಕೋರ್ಟಿಗೆ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್ ಮತ್ತು ಜಸ್ಟಿಸ್ ಸುಧಾಂಶು ಧುಲಿಯಾ ಅವರ ಪೀಠ ಹೇಳಿದೆ.
ತಾನು ರೀಜನಲ್ ರ್ಯಾಪಿಡ್ ಟ್ರಾನ್ಸಿಟ್ ಯೋಜನೆಗೆ ಅನುದಾನ ಒದಗಿಸುವುದಾಗಿ ದಿಲ್ಲಿ ಸರ್ಕಾರ ನೀಡಿದ ಹೇಳಿಕೆಯನ್ನು ಇಂದು ಸುಪ್ರೀಂ ಕೋರ್ಟ್ ಒಪ್ಪಿದೆ.
ಆದರೆ ಕಳೆದ ವಿಚಾರಣೆ ವೇಳೆ ಹಣಕಾಸಿನ ಕೊರತೆಯಿಂದ ಈ ಯೋಜನೆಗೆ ಅನುದಾನವೊದಗಿಸಲು ಸಾಧ್ಯವಿಲ್ಲ ಎಂದು ದಿಲ್ಲಿ ಸರ್ಕಾರ ಹೇಳಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ ನ್ಯಾಯಾಲಯ, ಕಳೆದ ಮೂರು ವರ್ಷಗಳಲ್ಲಿ ಸರ್ಕಾರವು ಜಾಹೀರಾತುಗಳಿಗೆ ಖರ್ಚುಮಾಡಿದ ಮೊತ್ತಗಳ ಕುರಿತು ಅಫಿಡವಿಟ್ ಸಲ್ಲಿಸುವಂತೆ ಹೇಳಿತ್ತು. ಅಂತೆಯೇ ಅಫಿಡವಿಟ್ ಅನ್ನು ದಿಲ್ಲಿ ಸರ್ಕಾರ ಸಲ್ಲಿಸಿತ್ತು. ಅದರಲ್ಲಿ ಜಾಹೀರಾತುಗಳಿಗೆ ಮಾಡಿದ ವೆಚ್ಚ 1073 ಕೋಟಿ ರೂ. ಎಂದು ನಮೂದಿಸಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್ ಪೀಠ, ಯೋಜನೆಗೆ ಸಮಾನ ಅನುದಾನ ಒದಗಿಸಲು ಸರ್ಕಾರ ನಿರಾಕರಿಸಿದ ನಂತರ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಲಾಗಿತ್ತು. ಸರ್ಕಾರ ಕಳೆದ 3 ವಿತ್ತೀಯ ವರ್ಷಗಳಲ್ಲಿ ರೂ. 1100 ಕೋಟಿಯಷ್ಟು ಹಣವನ್ನು ಜಾಹೀರಾತುಗಳಿಗೆ ವ್ಯಯಿಸಿರುವಾಗ ಖಂಡಿತವಾಗಿ ಮೂಲಭೂತ ಸೌಕರ್ಯ ಯೋಜನೆಗಳಿಗೆ ಅದು ಅನುದಾನ ಒದಗಿಸಬಹುದು,” ಎಂದು ಹೇಳಿದೆ.
“ಯೋಜನೆಗೆ ಅನುದಾನ ಒದಗಿಸಿ ಇಲ್ಲದೇ ಹೋದಲ್ಲಿ ಜಾಹೀರಾತು ವೆಚ್ಚವನ್ನು ನಾವು ಜಪ್ತಿ ಮಾಡುತ್ತೇವೆ,” ಎಂದು ಸರ್ಕಾರದ ಪರ ಹಾಜರಿದ್ದು ವಕೀಲ ಎ ಎಂ ಸಿಂಘ್ವಿ ಅವರಿಗೆ ನ್ಯಾಯಾಲಯ ಹೇಳಿದೆ.
ಸರ್ಕಾರ ಕಂತಿನ ಮೂಲಕ ಯೋಜನೆಗೆ ಹಣ ಒದಗಿಸಲಿದೆ ಎಂದು ವಕೀಲರು ಆಶ್ವಾಸನೆ ನೀಡಿದರು. ನಿಗದಿತ ಸಮಯಮಿತಿಯಲ್ಲಿ ಹಣ ಪಾವತಿಸಬೇಕು ಎಂದು ನ್ಯಾಯಾಲಯ ಹೇಳಿತಲ್ಲದೆ ಈಗಾಗಲೇ ಪಾವತಿಸಲು ಬಾಕಿಯಿರುವ ಹಣ ಪಾವತಿಸುವಂತೆ ಸೂಚಿಸಿದೆ.