ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಪ್ರತಿ ತಿಂಗಳು 4 ಸಾವಿರ ರೂ. ವರೆಗೆ ಸೌಲಭ್ಯ: ರಾಹುಲ್ ಗಾಂಧಿ

Update: 2023-11-02 16:36 GMT

ರಾಹುಲ್ ಗಾಂಧಿ  (Photo- PTI)

ಹೈದರಾಬಾದ್: ತೆಲಂಗಾಣದಲ್ಲಿ ನವೆಂಬರ್ 30ರಂದು ನಡೆಯಲಿರುವ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಸಾಮಾಜಿಕ ಪಿಂಚಣಿ, ಎಲ್‌ಪಿಜಿ ಸಿಲಿಂಡರ್ ಮೇಲೆ ಉಳಿತಾಯ ಹಾಗೂ ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ರೂಪದಲ್ಲಿ 4 ಸಾವಿರ ರೂ. ವರೆಗೆ ಸೌಲಭ್ಯಗಳನ್ನು ಮಹಿಳೆಯರು ಪಡೆಯಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ.

ಕಾಳೇಶ್ವರಂ ಯೋಜನೆಯ ಮೆಡಿಗಡ್ಡಾ (ಲಕ್ಷ್ಮೀ) ಅಣೆಕಟ್ಟು ಸಮೀಪ ಇರುವ ಅಂಬಟಿಪಲ್ಲಿ ಗ್ರಾಮದಲ್ಲಿ ಸ್ತ್ರೀ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ತೆಲಂಗಾಣ ಮುಖ್ಯಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಲೂಟಿಗೈದ ಎಲ್ಲಾ ಹಣವನ್ನು ಹಿಂದಿರುಗಿಸಲು ಕಾಂಗ್ರೆಸ್ ನಿರ್ಧರಿಸಿದೆ ಎಂದರು.

ಇಲ್ಲಿನ ಮುಖ್ಯಮಂತ್ರಿ ಲೂಟಿಯಿಂದ ತೆಲಂಗಾಣದ ಮಹಿಳೆಯರು ತೀವ್ರ ತೊಂದರೆಗೀಡಾಗಿದ್ದಾರೆ. ಮುಖ್ಯಮಂತ್ರಿ ಅವರು ಲೂಟಿಗೈದ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ಮೊದಲ ಹಂತವಾಗಿ ಪ್ರತಿ ತಿಂಗಳು ಮಹಿಳೆಯರ ಬ್ಯಾಂಕ್ ಖಾತೆಗೆ ಸಾಮಾಜಿಕ ಪಿಂಚಣಿಯಾಗಿ 2,500 ರೂ. ಜಮೆ ಮಾಡಲಾಗುವುದು. ಅಲ್ಲದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು 1,500 ರೂ. ಉಳಿತಾಯ ಮಾಡಲಿದ್ದೀರಿ. ಅಂದರೆ, 1,000 ರೂ. ಇರುವ ಎಲ್‌ಪಿಜಿ ಸಿಲಿಂಡರ್ ಅನ್ನು 500 ರೂ.ಗೆ ಪೂರೈಕೆ ಮಾಡಲಾಗುವುದು. ಅಲ್ಲದೆ, ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ರೂಪದಲ್ಲಿ 1,000 ರೂ. ನೀಡಲಾಗುವುದು ಎಂದರು.

ಈ ಎಲ್ಲಾ ಸೌಲಭ್ಯಗಳ ಮೊತ್ತ ಪ್ರತಿ ತಿಂಗಳು 4,000 ರೂ. ಆಗಲಿದೆ. ಇದನ್ನು ‘‘ಪರಜಲ ಸರಕಾರ’’ (ಜನರ ಸರಕಾರ) ಎಂದು ಕರೆಯಲಾಗುವುದು ಎಂದು ಅವರು ಹೇಳಿದರು.

ತೆಲಂಗಾಣದಲ್ಲಿ 1 ಲಕ್ಷ ಕೋಟಿ ರೂ. ಲೂಟಿಗೈಯಲಾಗಿದೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಕೆಸಿಆರ್ ನೇತೃತ್ವದ ಪಕ್ಷದ ನಡುವೆ ಸ್ಪರ್ಧೆಯಿದ್ದರೂ ಬಿಆರ್‌ಎಸ್, ಬಿಜೆಪಿ ಹಾಗೂ ಎಂಐಎಂ ಕೂಡ ಸ್ಪರ್ಧಿಸುತ್ತಿದೆ ಎಂದರು. 

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News