ಪುರುಷರು ಮುಟ್ಟಾಗುತ್ತಿದ್ದರೆ ಅವರಿಗೆ ಕಷ್ಟ ಅರ್ಥವಾಗುತ್ತಿತ್ತು: ನ್ಯಾಯಾಧೀಶೆಯರ ವಜಾ ಕುರಿತು ಸುಪ್ರೀಂ ಕೋರ್ಟ್ ಅಸಮಾಧಾನ
ಹೊಸದಿಲ್ಲಿ: ಮಧ್ಯಪ್ರದೇಶದಲ್ಲಿ ಸಿವಿಲ್ ನ್ಯಾಯಾಧೀಶೆಯರನ್ನು ವಜಾಗೊಳಿಸಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸರ್ವೋಚ್ಚ ನ್ಯಾಯಾಲಯವು,ಅವರನ್ನು ವಜಾಗೊಳಿಸಲು ಬಳಸಲಾಗಿದ್ದ ಮಾನದಂಡವನ್ನು ಟೀಕಿಸಿ,ಪುರುಷರು ಮುಟ್ಟಾಗುತ್ತಿದ್ದರೆ ಅವರಿಗೆ ಪರಿಸ್ಥಿತಿ ಅರ್ಥವಾಗುತ್ತಿತ್ತು ಎಂದು ಕುಟುಕಿದೆ.
ಮಂಗಳವಾರ ಮಧ್ಯಪ್ರದೇಶದಲ್ಲಿ ಆರು ನ್ಯಾಯಾಧೀಶೆಯರ ವಜಾಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನಾ ಮತ್ತು ಎನ್.ಕೋಟೇಶ್ವರ ಸಿಂಗ್ ಅವರ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಆರು ನ್ಯಾಯಾಧೀಶೆಯರನ್ನು ವಜಾಗೊಳಿಸಲಾಗಿದ್ದು,ಈ ಪೈಕಿ ಇಬ್ಬರನ್ನು ಇನ್ನೂ ಮರುಸೇರ್ಪಡೆ ಮಾಡಿಕೊಳ್ಳಲಾಗಿಲ್ಲ.
ನ್ಯಾಯಾಧೀಶೆಯರ ವಿಷಯವನ್ನು ನಿರ್ವಹಿಸುವಾಗ ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ಅನುಸರಿಸಿದ್ದ ಮಾನದಂಡವನ್ನು ಗಮನಿಸಿದ ಸರ್ವೋಚ್ಚ ನ್ಯಾಯಾಲಯವು ಅದನ್ನು ತರಾಟೆಗೆತ್ತಿಕೊಂಡಿತು.
ಪ್ರಕರಣಗಳನ್ನು ಇತ್ಯರ್ಥಗೊಳಿಸುವಲ್ಲಿ ನಿಧಾನಗತಿಗಾಗಿ ನ್ಯಾಯಾಧೀಶೆಯರನ್ನು ವಜಾಗೊಳಿಸಲಾಗಿದೆ ಎಂದು ರಾಜ್ಯದ ಪರ ವಕೀಲರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು,‘ಪುರುಷ ನ್ಯಾಯಾಧೀಶರಿಗೂ ಇದೇ ಮಾನದಂಡವಿರಲಿ,ಏನಾಗುತ್ತದೆ ಎಂದು ನಾವು ನೋಡುತ್ತೇವೆ ’ ಎಂದು ಹೇಳಿತು.
‘ಪುರುಷರೂ ಮುಟ್ಟಾಗಲಿ ಎಂದು ನಾನು ಬಯಸುತ್ತೇನೆ,ಆಗ ಮಾತ್ರ ಅವರಿಗೆ ಕಷ್ಟ ಅರ್ಥವಾಗುತ್ತದೆ ’ ಎಂದು ನ್ಯಾ.ನಾಗರತ್ನಾ ಕಿಡಿ ಕಾರಿದರು.
ನ್ಯಾಯಾಧೀಶೆಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ನರಳುತ್ತಿರುವಾಗ ಅವರು ನಿಧಾನಗತಿಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಬೇಡಿ ಮತ್ತು ಅವರನ್ನು ಮನೆಗೆ ಕಳುಹಿಸಬೇಡಿ ಎಂದೂ ಹೇಳಿದ ಸರ್ವೋಚ್ಚ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಡಿ.೧೨ಕ್ಕೆ ನಿಗದಿಗೊಳಿಸಿತು.
ಮಧ್ಯಪ್ರದೇಶ ಉಚ್ಚ ನ್ಯಾಯಾಲಯದಿಂದ ಆರು ನ್ಯಾಯಾಧೀಶೆಯರ ವಜಾ ಕುರಿತು ಸ್ವಯಂಪ್ರೇರಿತ ಅರ್ಜಿಯೊಂದನ್ನು ಸರ್ವೋಚ್ಚ ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ.
ಜೂನ್ ೨೦೨೩ರಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಶಿಫಾರಸಿನ ಮೇರಗೆ ರಾಜ್ಯ ಸರಕಾರವು ಆರು ನ್ಯಾಯಾಧೀಶೆಯರನ್ನು ಸೇವೆಯಿಂದ ವಜಾಗೊಳಿಸಿತ್ತು. ತರಬೇತಿ ಅವಧಿಯಲ್ಲಿ ಕಾರ್ಯಕ್ಷಮತೆ ಅತೃಪ್ತಿಕರವಾಗಿದೆ ಎಂದು ಆಡಳಿತಾತ್ಮಕ ಸಮಿತಿ ಮತ್ತು ಪೂರ್ಣ ನ್ಯಾಯಾಲಯದ ಸಭೆಯು ನಿರ್ಧರಿಸಿದ್ದ ಹಿನ್ನೆಲೆಯಲ್ಲಿ ರಾಜ್ಯದ ಕಾನೂನು ಇಲಾಖೆಯು ನ್ಯಾಯಾಧೀಶೆಯರನ್ನು ವಜಾಗೊಳಿಸಿತ್ತು.