ಬಜೆಟ್ ನಲ್ಲಿ ವಿಪಕ್ಷ ಆಳ್ವಿಕೆಯ ರಾಜ್ಯಗಳ ಕಡೆಗಣನೆ | ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಲು ಸಿದ್ದರಾಮಯ್ಯ ಸಹಿತ ನಾಲ್ಕು ರಾಜ್ಯಗಳ ಸಿಎಂಗಳ ನಿರ್ಧಾರ
ಹೊಸದಿಲ್ಲಿ: ನೂತನ ಕೇಂದ್ರ ಬಜೆಟ್ ನಲ್ಲಿ ತಮ್ಮ ರಾಜ್ಯಗಳ ಬೇಡಿಕೆಯನ್ನು ಕಡೆಗಣಿಸಿರುವುದನ್ನು ಪ್ರತಿಭಟಿಸಿ ಜುಲೈ 27ರಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಲು ಸಿದ್ದರಾಮಯ್ಯ ಸೇರಿದಂತೆ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಬುಧವಾರ ನಿರ್ಧರಿಸಿದ್ದಾರೆ.
ತಮಿಳುನಾಡಿನ ಸ್ಟಾಲಿನ್, ತೆಲಂಗಾಣದ ರೇವಂತ್ ರೆಡ್ಡಿ ಹಾಗೂ ಹಿಮಾಚಲ ಪ್ರದೇಶದ ಸುಖ್ವಿಂದರ್ ಸುಖು ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಲಿರುವ ಇತರ ಮೂವರು ಮುಖ್ಯಮಂತ್ರಿಗಳಾಗಿದ್ದಾರೆ.
ಕನ್ನಡಿಗರ ಕಳವಳಗಳಿಗೆ ನೀತಿ ಆಯೋಗವು ಸ್ಪಂದಿಸದೆ ಇದ್ದಲ್ಲಿ, ಅದರ ಸಭೆಯಲ್ಲಿ ಪಾಲ್ಗೊಳ್ಳುವುದರಲ್ಲಿ ಅರ್ಥವಿಲ್ಲವೆಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕದ ಅವಶ್ಯಕತೆಗಳ ಬಗ್ಗೆ ಚರ್ಚಿಸಲು ಹೊಸದಿಲ್ಲಿಯಲ್ಲಿ ಸರ್ವಪಕ್ಷಗಳ ಸಂಸದರ ‘‘ಸಭೆಯನ್ನು ನಾನು ನಡೆಸಿದ ಹೊರತಾಗಿಯೂ ಕೇಂದ್ರ ಬಜೆಟ್ನಲ್ಲಿ ನಮ್ಮ ರಾಜ್ಯದ ಬೇಡಿಕೆಗಳನ್ನು ನಿರಾಕರಿಸಲಾಗಿದೆ’’ ಎಂದವರು ತಿಳಿಸಿದ್ದಾರೆ.
‘‘ರಾಜ್ಯಗಳ ಸರ್ವಪಕ್ಷಗಳ ಸಂಸದರ ಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಪಾಲ್ಗೊಂಡಿದ್ದರಾದರೂ, ಕರ್ನಾಟಕದ ಜನತೆಯ ಕಳವಳಗಳನ್ನು ಅವರು ಕಡೆಗಣಿಸಿದ್ದಾರೆ. ಕನ್ನಡಿಗರ ಅಹವಾಲುಗಳನ್ನು ಆಲಿಸಲಾಗಿದೆಯೆಂದು ನಾವು ಭಾವಿಸುವುದಿಲ್ಲ. ಹೀಗಾಗಿ ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳುವುದರಲ್ಲಿ ಅರ್ಥವಿಲ್ಲ’’ ಎಂದು ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಬರೆದಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಕೂಡಾ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸುವ ತನ್ನ ಸರಕಾರದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಚೆನ್ನೈನಲ್ಲಿ ಮಂಗಳವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಬಜೆಟ್ನಲ್ಲಿ ತಮಿಳುನಾಡಿಗೆ ಅತಿ ದೊಡ್ಡ ದ್ರೋಹವೆಸಗಲಾಗಿದೆಯೆಂದು ಆಪಾದಿಸಿದ್ದಾರೆ. ಕೇಂದ್ರ ಸರಕಾರದ ಆರ್ಥಿಕ ನೀತಿಗಳು ಹಾಗೂ ಬಜೆಟ್ ಅನುದಾನಗಳ ಬಗೆಗೂ ಅವರು ಬಲವಾದ ಅಸಂತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ.
ಜನಸಾಮಾನ್ಯರನ್ನು ತೀವ್ರವಾಗಿ ಬಾಧಿಸುವ ನಿರುದ್ಯೋಗ ಹಾಗೂ ಹಣದುಬ್ಬರದ ಸಮಸ್ಯೆಗಳಿಗೆ ಈ ಬಜೆಟ್ ಸ್ಪಂದಿಸಿಲ್ಲವೆAದು ಅವರು ಹೇಳಿದರು.
ಹಿಮಾಚಲದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಹಾಗೂ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಕೂಡಾ ಬಜೆಟ್ನಲ್ಲಿ ತಮ್ಮ ರಾಜ್ಯಕ್ಕೆ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.