ಕರ್ನಾಟಕದಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ 29 ಸಾವಿರ ಎಕರೆ ವಕ್ಫ್ ಭೂಮಿಯ ಅಕ್ರಮ ಪರಿವರ್ತನೆ : ಕೇಂದ್ರ ಸಚಿವ ಕಿರಣ್ ರಿಜಿಜು

Update: 2024-08-09 15:04 GMT

ಕಿರಣ್ ರಿಜಿಜು | PC : PTI 

ಹೊಸದಿಲ್ಲಿ : ವಕ್ಫ್ ಜಮೀನಿನ ಅತಿಕ್ರಮಣಗಳ ಕುರಿತು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ 2012ರ ವರದಿಯಂತೆ ಕರ್ನಾಟಕ ವಕ್ಫ್ ಮಂಡಳಿಯು ವಾಣಿಜ್ಯಉದ್ದೇಶಗಳಿಗಾಗಿ 29,000 ಎಕರೆ ಭೂಮಿಯನ್ನು ಅಕ್ರಮವಾಗಿ ಪರಿವರ್ತನೆ ಮಾಡಿದೆ ಎಂದು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಗುರುವಾರ ಲೋಕಸಭೆಯಲ್ಲಿ ವಕ್ಫ್(ತಿದ್ದುಪಡಿ) ಮಸೂದೆ 2024ನ್ನು ಮಂಡಿಸಿದ ಸಂದರ್ಭದಲ್ಲಿ ಹೇಳಿದರು.

ದೇಶದಲ್ಲಿ ವಕ್ಫ್ ಜಮೀನುಗಳ ದುರುಪಯೋಗ ಮತ್ತು ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯದ ಕುರಿತು ವಿವರಿಸಿದ ಸಚಿವರು, ಅನ್ವರ್ ಮಾಣಿಪ್ಪಾಡಿ ಸಮಿತಿಯ ವರದಿಯನ್ನು ಉಲ್ಲೇಖಿಸಿದರು. ವಕ್ಫ್ ಮಂಡಳಿಯಲ್ಲಿ 54,000 ಎಕರೆ ಜಮೀನು ನೋಂದಣಿಯಾಗಿದ್ದು, 27,000 ಎಕರೆ ಜಮೀನು ನೋಂದಣಿಯಾಗಿಲ್ಲ ಎಂದು ವರದಿಯು ಹೇಳಿತ್ತು. 29,000 ಎಕರೆ ನೋಂದಣಿಗೊಂಡ ಜಮೀನನ್ನು ಹಿರಿಯ ರಾಜಕಾರಣಿಗಳು ಸೇರಿದಂತೆ ಪ್ರತಿಷ್ಠಿತ ವ್ಯಕ್ತಿಗಳು ಕಬಳಿಸಿದ್ದಾರೆ ಎಂಬ ಆತಂಕಕಾರಿ ವಿಷಯವನ್ನು ವರದಿಯು ಬಹಿರಂಗಗೊಳಿಸಿತ್ತು.

ಈ ನಡುವೆ ಮಸೂದೆ ಮಂಡನೆಗೆ ಪ್ರತಿಕ್ರಿಯಿಸಿರುವ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ‘ಕರಾಳ’ ಮತ್ತು ‘ಅಸಾಂವಿಧಾನಿಕ’ ವಕ್ಫ್ ಕಾಯ್ದೆಯನ್ನು ರದ್ದುಗೊಳಿಸುವಂತೆ ಕೋರಿ ತಾನು ಪ್ರಧಾನಿ ಮೋದಿಯವರಿಗೆ ಆ.4ರಂದು ಪತ್ರ ಬರೆದಿದ್ದೆ ಎಂದು ಹೇಳಿದ್ದಾರೆ.

ಇಂಡಿಯಾ ಪೋರ್ಟಲ್‌ನ ವಕ್ಫ್ ಅಸೆಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್‌ನಲ್ಲಿ ದೇಶಾದ್ಯಂತ ಒಟ್ಟು 8.72 ಲ.ವಕ್ಫ್ ಆಸ್ತಿಗಳು ನೋಂದಣಿಯಾಗಿದ್ದು, ಈ ಪೈಕಿ ಕರ್ನಾಟಕದಲ್ಲಿಯ 62,830 ವಕ್ಫ್ ಆಸ್ತಿಗಳು ಸೇರಿವೆ ಎಂದು ರಿಜಿಜು ಸಂಸತ್ತಿನಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ ಚೌಟ ಅವರ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ. ಆದರೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ವರದಿಯಂತೆ ಭಾರೀ ಪ್ರಮಾಣದ ವಕ್ಫ್ ಜಮೀನುಗಳು ನೋಂದಣಿಯಾಗಿಲ್ಲ ಮತ್ತು ನೋಂದಣಿಗೊಂಡ ಜಮೀನುಗಳಲ್ಲಿ ವ್ಯಾಪಕ ಅತಿಕ್ರಮಣಗಳು ನಡೆದಿವೆ.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಧ್ಯಕ್ಷರಾಗಿದ್ದ ಬಿಜೆಪಿ ನಾಯಕ ಅನ್ವರ್ ಮಾಣಿಪ್ಪಾಡಿಯವರು 2012, ಮಾ.23ರಂದು ಸಲ್ಲಿಸಿದ್ದ ವರದಿಯು 2.30 ಲಕ್ಷ ಕೋಟಿ ರೂ.ಮೌಲ್ಯದ ಸುಮಾರು 29,000 ಎಕರೆ ಜಮೀನನ್ನು ರಾಜಕೀಯ ನಾಯಕರು ಮತ್ತು ಅಧಿಕಾರಿಗಳು ಕಬಳಿಸಿದ್ದಾರೆ ಎಂದು ತಿಳಿಸಿತ್ತು.

ಹಿರಿಯ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಮಾಜಿ ರಾಜ್ಯಸಭಾ ಸದಸ್ಯ ರೆಹಮಾನ್ ಖಾನ್, ಮಾಜಿ ಮುಖ್ಯಮಂತ್ರಿ ದಿ.ಧರ್ಮಸಿಂಗ್, ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ ಶರೀಫ್, ಮಾಜಿ ಸಚಿವರಾದ ಕಮರುಲ್ ಇಸ್ಲಾಮ್, ತನ್ವೀರ್ ಸೇಠ್ ಮತ್ತು ರೋಷನ್ ಬೇಗ್, ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್, ಮಾಜಿ ಎಂಎಲ್‌ಸಿ ಸಿ.ಎಂ.ಇಬ್ರಾಹಿಂ, ಮಾಜಿ ಸಚಿವ ಹಿಂಡಸಗೇರಿ, ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ಮಾಜಿ ಶಾಸಕರಾದ ಇಕ್ಬಾಲ್ ಅನ್ಸಾರಿ ಮತ್ತು ಸೈಯದ್ ಯಾಸಿನ್ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಹಲವಾರು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಭೂಕಬಳಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯು ಆರೋಪಿಸಿತ್ತು. ನಂತರದ ಸರಕಾರಗಳು ಸರ್ವೋಚ್ಚ ನ್ಯಾಯಾಲಯವು ನಿರ್ದೇಶನ ನೀಡುವವರೆಗೂ ವಿಧಾನ ಮಂಡಲದಲ್ಲಿ ವರದಿ ಮಂಡನೆಯಿಂದ ನುಣುಚಿಕೊಂಡಿದ್ದೇಕೆ ಎನ್ನುವುದನ್ನು ಇದು ವಿವರಿಸುತ್ತದೆ. ಅಂತಿಮವಾಗಿ ಸೆಪ್ಟಂಬರ್ 2020ರಲ್ಲಿ ಯಡಿಯೂರಪ್ಪ ಸರಕಾರವು ವರದಿಯನ್ನು ಮಂಡಿಸಿತ್ತು.

ಸ್ಮಶಾನ ಅತಿಕ್ರಮಣ ಕುರಿತು ದೂರುಗಳ ಹಿನ್ನೆಲೆಯಲ್ಲಿ ಮಾಣಿಪ್ಪಾಡಿ ಬೀದರ್ ಜಿಲ್ಲೆಯಲ್ಲಿ ಮೊದಲ ದಾಳಿ ನಡೆಸಿದ್ದರು. ನಂತರ ಪ್ರತಿ ಜಿಲ್ಲೆಗೂ ಭೆಟಿ ನೀಡಿದ್ದ ಅವರು ವಕ್ಫ್ ಜಮೀನಿನ ಅತಿಕ್ರಮಣ ಪ್ರಮಾಣವನ್ನು ದಾಖಲಿಸಿದ್ದರು. ವಕ್ಫ್ ಆಸ್ತಿಗಳ ‘ಮುತುವಲ್ಲಿಗಳು(ಉಸ್ತುವಾರಿಗಳು)’ರಾಜಕಾರಣಿಗಳೊಂದಿಗೆ ಶಾಮೀಲಾಗಿದ್ದಾರೆ ಮತ್ತು ಇದರಿಂದಾಗಿ ಪ್ರತಿ ಸರ್ವೆಯಲ್ಲಿಯೂ ವಕ್ಫ್ ಜಮೀನುಗಳ ವ್ಯಾಪ್ತಿ ಕುಗ್ಗುತ್ತಿದೆ ಎಂದು ಆಯೋಗವು ತನ್ನ ವರದಿಯಲ್ಲಿ ತಿಳಿಸಿತ್ತು.

ಭಾರತದಲ್ಲಿ ರೇಲ್ವೆ ಮತ್ತು ರಕ್ಷಣಾ ಪಡೆಗಳ ಬಳಿಕ ವಕ್ಫ್ ಮೂರನೇ ಅತಿ ದೊಡ್ಡ ಭೂಮಾಲಿಕನಾಗಿರುವ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಹಲವಾರು ನಾಯಕರು ಸುಧಾರಣೆಗಳನ್ನು ಪ್ರಸ್ತಾವಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News