ಅಕ್ರಮ ಹಣ ವರ್ಗಾವಣೆ ಪ್ರಕರಣ: ನಟ ಪ್ರಕಾಶ್ ರಾಜ್ ಗೆ ಈಡಿ ಸಮನ್ಸ್

Update: 2023-11-23 15:26 GMT

ಪ್ರಕಾಶ್ ರಾಜ್ | Photo: PTI

ಚೆನ್ನೈ: ತಿರುಚಿರಾಪಳ್ಳಿ ಮೂಲದ ಜ್ಯುವೆಲ್ಲರಿ ಸಮೂಹದ ವಿರುದ್ಧ 100 ಕೋಟಿ ರೂ. ವಂಚನೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನಟ ಪ್ರಕಾಶ್ ರಾಜ್ ಅವರಿಗೆ ಜಾರಿ ನಿರ್ದೇಶನಾಲಯ ಗುರುವಾರ ಸಮನ್ಸ್ ಜಾರಿಗೊಳಿಸಿದೆ.

ಪೋಂಝಿ ಯೋಜನೆಗಳನ್ನು ನಡೆಸುತ್ತಿರುವ ಹಾಗೂ ಹೂಡಿಕೆದಾರರಿಗೆ 100 ಕೋಟಿ ರೂ. ವಂಚಿಸಿದ ಆರೋಪದಲ್ಲಿ ಚೆನ್ನೈ ಸೇರಿದಂತೆ ತಮಿಳುನಾಡು ಹಾಗೂ ಪುದುಚೇರಿಯ ಹಲವು ಸ್ಥಳಗಳಲ್ಲಿ ಪ್ರಣವ್ ಜ್ಯುವೆಲ್ಲರಿಯ ಶಾಖೆಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು.

ಗಮನಾರ್ಹ ಅವಧಿ ವರೆಗೆ ಪ್ರಣವ್ ಜ್ಯುವೆಲ್ಲರಿಯ ಪ್ರಚಾರ ರಾಯಭಾರಿಯಾಗಿದ್ದ ನಟ ಪ್ರಕಾಶ್ ರಾಜ್ ಅವರು, ಈ ವಿಷಯದ ಕುರಿತಂತೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಂದಿನ ವಾರ ಚೆನ್ನೈ ಈಡಿ ಕಚೇರಿಯಲ್ಲಿ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ.

ಪ್ರಣವ್ ಜ್ಯುವೆಲ್ಲರಿ ನಡೆಸುತ್ತಿರುವ ಮಳಿಗೆಗಳನ್ನು ಅಕ್ಟೋಬರ್ ನಲ್ಲಿ ಬಂದ್ ಮಾಡಲಾಗಿತ್ತು ಹಾಗೂ ದೂರಿನ ಆಧಾರದಲ್ಲಿ ತಮಿಳುನಾಡಿನ ತಿರುಚಿಯಲ್ಲಿರುವ ಆರ್ಥಿಕ ಅಪರಾಧ ದಳ ಜ್ಯುವೆಲ್ಲರಿಯ ಮಾಲಕ ಮದನ್ ಅವರ ವಿರುದ್ಧ ಪ್ರಕರಣ ದಾಖಲಿಸಿತ್ತು. ಈ ತಿಂಗಳ ಆರಂಭದಲ್ಲಿ ಮದನ್ ಹಾಗೂ ಅವರ ಪತ್ನಿಯ ವಿರುದ್ಧ ಲುಕೌಟ್ ನೋಟಿಸ್ ಜಾರಿಗೊಳಿಸಲಾಗಿತ್ತು.

ಅತ್ಯಧಿಕ ಲಾಭದ ಭರವಸೆ ನೀಡಿ ಚಿನ್ನದಲ್ಲಿ ಹೂಡಿಕೆ ಯೋಜನೆಯ ನೆಪದಲ್ಲಿ ಪ್ರಣವ್ ಜ್ಯುವೆಲ್ಲರಿ 100 ಕೋ.ರೂ. ಸಂಗ್ರಹಿಸಿದೆ. ಆದರೆ, ಭರವಸೆ ನೀಡಿದಂತೆ ನಡೆದುಕೊಂಡಿಲ್ಲ ಹೂಡಿಕೆ ಹಣವನ್ನು ಕೂಡ ಹೂಡಿಕೆದಾರರಿಗೆ ಹಿಂದಿರುಗಿಸಿಲ್ಲ ಎಂದು ಜಾರಿ ನಿರ್ದೇಶನಾಲಯ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News