ಅಕ್ರಮ ಹಣ ವರ್ಗಾವಣೆ ಪ್ರಕರಣ: ಜೆಟ್ ಏರ್‌ವೇಸ್‌ನ 538 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
ಹೊಸದಿಲ್ಲಿ: ಜಾರಿ ನಿರ್ದೇಶನಾಲಯ (ಈ.ಡಿ.)ವು ಜೆಟ್ ಏರ್‌ವೇಸ್ (ಇಂಡಿಯಾ) ಲಿ.ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 538 ಕೋಟಿ ರೂ.ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದೆ.
ಲಂಡನ್, ದುಬೈ ಮತ್ತು ಭಾರತದ ಕೆಲವು ರಾಜ್ಯಗಳಲ್ಲಿರುವ ಜೆಟ್ ಏರ್‌ವೇಸ್‌ನ ಸ್ಥಾಪಕ ನರೇಶ್ ಗೋಯಲ್, ಪತ್ನಿ ಅನಿತಾ ಗೋಯಲ್ ಮತ್ತು ಪುತ್ರ ನಿವಾನ್ ಗೋಯಲ್ ಸೇರಿದಂತೆ ಕಂಪನಿಗಳು ಮತ್ತು ವ್ಯಕ್ತಿಗಳ ಹೆಸರಿನಲ್ಲಿರುವ 17 ವಸತಿ ಫ್ಲ್ಯಾಟ್‌ಗಳು, ಬಂಗಲೆಗಳು ಮತ್ತು ವಾಣಿಜ್ಯ ಕಟ್ಟಡಗಳು ಈ ಆಸ್ತಿಗಳಲ್ಲಿ ಸೇರಿವೆ. ಗೋಯಲ್‌ಗಳ ಹೊರತಾಗಿ ಕೆಲವು ಆಸ್ತಿಗಳು ಜೆಟ್ ಏರ್ ಪ್ರೈ.ಲಿ.ಮತ್ತು ಜೆಟ್ ಎಂಟರ್‌ಪ್ರೈಸಸ್ ಪ್ರೈ.ಲಿ.ನ ಹೆಸರಿನಲ್ಲಿವೆ.
ಈ.ಡಿ. ಕೆನರಾ ಬ್ಯಾಂಕ್ ದಾಖಲಿಸಿರುವ ವಂಚನೆ ಪ್ರಕರಣದಲ್ಲಿ ಮಂಗಳವಾರ ಗೋಯಲ್ ಮತ್ತು ಇತರ ಐವರ ವಿರುದ್ಧ ದೋಷಾರೋಪ ಪಟ್ಟಿಗಳನ್ನು ಸಲ್ಲಿಸಿದೆ.
ಈಗ ಸ್ಥಗಿತಗೊಂಡಿರುವ ಖಾಸಗಿ ವಿಮಾನಯಾನ ಸಂಸ್ಥೆಗೆ ತಾನು 848 ಕೋ.ರೂ.ವರೆಗೆ ಸಾಲಮಿತಿಗಳು ಮತ್ತು ಸಾಲಗಳನ್ನು ಮಂಜೂರು ಮಾಡಿದ್ದೆ ಮತ್ತು ಈ ಪೈಕಿ 538 ಕೋ.ರೂ.ಬಾಕಿಯಾಗಿದೆ ಎಂದು ಕೆನರಾ ಬ್ಯಾಂಕ್ ತನ್ನ ದೂರಿನಲ್ಲಿ ಆರೋಪಿಸಿದೆ.
ಈ.ಡಿ. ಸೆ.1ರಂದು ಗೋಯಲ್‌ರನ್ನು ಅಕ್ರಮ ಹಣ ವರ್ಗಾವಣೆ(ತಡೆ) ಕಾಯ್ದೆಯಡಿ ಬಂಧಿಸಿದ್ದು,ಅವರು ಪ್ರಸ್ತುತ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದಾರೆ.