ಆಸ್ಪತ್ರೆಗಳಿಗೆ ವಿಮಾನ ನಿಲ್ದಾಣ ರೀತಿಯ ಭದ್ರತೆ ನೀಡುವಂತೆ ಕೋರಿ ಪ್ರದಾನಿಗೆ ಭಾರತೀಯ ವೈದ್ಯಕೀಯ ಮಂಡಳಿ ಪತ್ರ
ಹೊಸದಿಲ್ಲಿ: ವೈದ್ಯರು ಹಾಗೂ ದಾದಿಯರ ಸುರಕ್ಷೆ ಹಾಗೂ ಕೆಲಸದ ಪರಿಸ್ಥಿತಿ ಸುಧಾರಿಸಲು ಹಲವು ಕ್ರಮಗಳನ್ನು ಪ್ರಸ್ತಾವಿಸಿ ಭಾರತೀಯ ವೈದ್ಯಕೀಯ ಮಂಡಳಿ (ಐಎಂಎ) ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದೆ.
ಕೋಲ್ಕತ್ತಾದ ಆರ್‌ಜಿ ಕಾರ್ ಸರಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆದ ನಡುವೆ ಐಎಂಎ ಪ್ರಧಾನಿ ಅವರಿಗೆ ಪತ್ರ ರವಾನಿಸಿದೆ.
ಆಸ್ಪತ್ರೆಗಳಲ್ಲಿ ಭದ್ರತಾ ಶಿಷ್ಟಾಚಾರಗಳು ವಿಮಾನ ನಿಲ್ದಾಣಗಳಿಗಿಂತ ಕಡಿಮೆ ಇರಬಾರದು. ಆಸ್ಪತ್ರೆಗಳನ್ನು ಸುರಕ್ಷಿತ ವಲಯವಾಗಿ ಘೋಷಿಸುವುದು ಮೊದಲ ಹಂತ. ಸಿಸಿಟಿವಿ ಕೆಮೆರಾ, ಭದ್ರತಾ ಸಿಬ್ಬಂದಿ ನಿಯೋಜನೆ ಹಾಗೂ ಶಿಷ್ಟಾಚಾರಗಳನ್ನು ಅನುಸರಿಸುವುದು ನಂತರದ ಹಂತ ಎಂದು ಅದು ಹೇಳಿದೆ.
ಕೋಲ್ಕತ್ತಾದ ಘಟನೆ ಕುರಿತಂತೆ ಸಮಯ ಮಿತಿಯಲ್ಲಿ ನಿಖರವಾದ, ವೃತ್ತಿಪರ ತನಿಖೆ ನಡೆಸುವಂತೆ ಹಾಗೂ ನ್ಯಾಯ ನೀಡುವಂತೆ ಅದು ಆಗ್ರಹಿಸಿದೆ. ದುಃಖತಪ್ತ ಕುಟುಂಬಕ್ಕೆ ಸೂಕ್ತ ಹಾಗೂ ಗೌರವಕ್ಕೆ ತಕ್ಕುದಾದ ಪರಿಹಾರ ನೀಡಬೇಕು ಎಂದು ಐಎಂಎ ಆಗ್ರಹಿಸಿದೆ.