ಇದೇ ಮೊದಲ ಬಾರಿಗೆ ಸೇನಾಪಡೆ ಮತ್ತು ನೌಕಾಪಡೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿರುವ ಇಬ್ಬರು ಸಹಪಾಠಿಗಳು

Update: 2024-06-30 05:19 GMT

ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ / ಅಡ್ಮಿರಲ್ ದಿನೇಶ್ ತ್ರಿಪಾಠಿ (Photo: NDTV)

ಹೊಸದಿಲ್ಲಿ: ದೇಶದ ಸೇನಾ ಇತಿಹಾಸದಲ್ಲೇ ಮೊದಲ ಬಾರಿಗೆ ಇಬ್ಬರು ಸಹಪಾಠಿಗಳು ಅಂದರೆ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಮತ್ತು ಅಡ್ಮಿರಲ್ ದಿನೇಶ್ ತ್ರಿಪಾಠಿ ಕ್ರಮವಾಗಿ ಭಾರತದ ಸೇನಾಪಡೆ ಹಾಗೂ ನೌಕಾಪಡೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ.

ನೌಕಾಪಡೆಯ ಮುಖ್ಯ ಅಡ್ಮಿರಲ್ ದಿನೇಶ್ ತ್ರಿಪಾಠಿ ಹಾಗೂ ಸೇನಾಪಡೆಯ ನಿಯೋಜಿತ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಮಧ್ಯಪ್ರದೇಶದ ರೇವಾ ಪಟ್ಟಣದ ಸೈನಿಕಶಾಲೆಯಲ್ಲಿ ಓದಿದ್ದರು. 1970ರ ದಶಕದಲ್ಲಿ ಇವರು ಆ ಶಾಲೆಯ 5ನೇ ತರಗತಿಯ ಎ ಸೆಕ್ಷನ್ನಲ್ಲಿ ಸಹಪಾಠಿಗಳಾಗಿದ್ದರು. ಶಾಲೆಯಲ್ಲಿ ಇವರ ಕ್ರಮಾಂಕ ಕೂಡಾ ಸನಿಹದಲ್ಲಿತ್ತು. ದ್ವಿವೇದಿಯವರ ಕ್ರಮಸಂಖ್ಯೆ 931 ಆಗಿದ್ದರೆ, ತ್ರಿಪಾಠಿ 938 ಕ್ರಮಸಂಖ್ಯೆ ಹೊಂದಿದ್ದರು.

ಇಬ್ಬರೂ ವಿಭಿನ್ನ ಸೇವೆಯಲ್ಲಿದ್ದರೂ, ಶಾಲಾ ದಿನಗಳ ಇವರ ಬಾಂಧವ್ಯ ನಿರಂತರವಾಗಿ ಮುಂದುವರಿದಿತ್ತು. ಇಬ್ಬರು ಅಧಿಕಾರಿಗಳು ಸದಾ ಸಂಪರ್ಕದಲ್ಲಿದ್ದರು. ಉನ್ನತ ಹುದ್ದೆಯಲ್ಲಿರುವ ಇಬ್ಬರು ಅಧಿಕಾರಿಗಳ ಇಂಥ ನಿಕಟ ಸಂಬಂಧ ಉಭಯ ಪಡೆಗಳ ಸಂಬಂಧವನ್ನು ಬಲಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಇಬ್ಬರೂ ಅಧಿಕಾರಿಗಳನ್ನು ಬಲ್ಲ ಸೇನಾ ಅಧಿಕಾರಿಗಳು ಹೇಳುತ್ತಾರೆ.

"ಬೆಳೆಯುವ ಕುಡಿಗಳಾಗಿದ್ದ ಇಬ್ಬರು ವಿದ್ಯಾರ್ಥಿಗಳು 50 ವರ್ಷಗಳ ಬಳಿಕ ತಮ್ಮ ಸೇವಾಕ್ಷೇತ್ರದ ಅತ್ತುನ್ನತ ಹುದ್ದೆಯನ್ನು ಅಲಂಕರಿಸಿರುವುದು ಮಧ್ಯಪ್ರದೇಶದ ರೇವಾ ಸೈನಿಕ ಶಾಲೆಗೆ ಹೆಮ್ಮೆ" ಎಂದು ರಕ್ಷಣಾ ಸಚಿವಾಲಯದ ವಕ್ತಾರ ಎ.ಭರತ್ ಭೂಷಣ್ ಬಾಬು ಎಕ್ಸ್‌ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇಬ್ಬರು ಅಧಿಕಾರಿಗಳ ನೇಮಕ ಕೂಡಾ ಕೇವಲ ಎರಡು ತಿಂಗಳ ಅಂತರದಲ್ಲಿ ಆಗಿರುವುದು ವಿಶೇಷ. ಅಡ್ಮಿರಲ್ ತ್ರಿಪಾಠಿ ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ಮೇ 1ರಂದು ಅಧಿಕಾರ ವಹಿಸಿಕೊಂಡರೆ, ಲೆಫ್ಟಿನೆಂಟ್ ಜನರಲ್ ದ್ವಿವೇದಿ ನಾಳೆ ಹೊಸ ಹುದ್ದೆ ಅಲಂಕರಿಸಲಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News