ಹರಿದ್ವಾರದಲ್ಲಿ ಕನ್ವರ್ ಯಾತ್ರೆಯ ಮಾರ್ಗದ ಮಸೀದಿಗಳು, ಮಝರ್‌ಗೆ ಬಿಳಿ ಶೀಟ್ ಅಳವಡಿಕೆ
ಲಕ್ನೋ: ಕನ್ವರ್ ಯಾತ್ರೆಯ ಮಾರ್ಗದಲ್ಲಿ ಹರಿದ್ವಾರದಲ್ಲಿರುವ ಎರಡು ಮಸೀದಿಗಳು ಮತ್ತು ಒಂದು ಮಝರ್ ಅನ್ನು ದೊಡ್ಡ ಬಿಳಿ ಶೀಟ್‌ಗಳನ್ನು ಬಳಸಿ ಮರೆಮಾಡಲಾಗಿರುವುದು ಶುಕ್ರವಾರ ಬೆಳಿಗ್ಗೆ ಕಂಡು ಬಂದಿದೆ. ಸಂಜೆಯೊಳಗೆ ಜಿಲ್ಲಾಡಳಿತ ಶೀಟ್‌ಗಳನ್ನು ತೆರವುಗೊಳಿಸಿದ್ದು, ಹೀಗೆ ಮಸೀದಿಗಳನ್ನು ಮರೆಮಾಡಲಾಗಿರುವುದು ತಪ್ಪು ಎಂದು ಪೊಲೀಸ್ ಇಲಾಖೆ ಹೇಳಿದೆ.
ಈ ರೀತಿ ಶೀಟ್‌ಗಳನ್ನು ಹಾಕಲು ಯಾವುದೇ ಆದೇಶ ನೀಡಲಾಗಿರಲಿಲ್ಲ ಎಂದು ಆಡಳಿತ ಹೇಳಿದರೆ, ಹರಿದ್ವಾರ ಜಿಲ್ಲಾ ಉಸ್ತುವಾರಿ ಸಚಿವ ಸತ್ಪಾಲ್ ಮಹಾರಾಜ್ ಮಾತನಾಡಿ, ಯಾವುದೇ ಅಶಾಂತಿಯ ಘಟನೆಯನ್ನು ತಡೆಯಲು ಹಾಗೂ ಕನ್ವರ್ ಯಾತ್ರೆ ಸುಗಮವಾಗಿ ನಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಯಾವುದೇ ಕಟ್ಟಡ ನಿರ್ಮಾಣವಾಗುವಾಗ ಇದೇ ರೀತಿ ಮುಚ್ಚಲಾಗುತ್ತದೆ, ನಾವು ಹಾಗೆಯೇ ಮಾಡಿದ್ದೇವೆ, ಪ್ರತಿಕ್ರಿಯೆ ಹೇಗಿರಲಿದೆ ನೋಡೋಣ, ಎಂದಿದ್ದಾರೆ.
ಹರಿದ್ವಾರದಲ್ಲಿರುವ ಕನ್ವರ್ ಯಾತ್ರೆಯ ಮಾರ್ಗವಾದ ಜ್ವಾಲಾಪುರ್ ಪ್ರದೇಶದಲ್ಲಿ ಈ ಎರಡು ಮಸೀದಿಗಳು ಮತ್ತು ಮಝರ್ ಇವೆ. ಈ ರೀತಿ ಇವುಗಳನ್ನು ಯಾತ್ರೆ ಸಂದರ್ಭ ಶೀಟ್ ಹಾಕಿ ಮರೆಮಾಡಲಾಗಿದ್ದು ಇದೇ ಪ್ರಥಮ ಬಾರಿ.
ಪೊಲೀಸ್ ಇಲಾಖೆ ಅಥವಾ ಜಿಲ್ಲಾಡಳಿತ ಈ ರೀತಿ ಶೀಟ್ ಹಾಕಲು ಯಾವುದೇ ಆದೇಶ ನೀಡಿರಲಿಲ್ಲ ಎಂದು ಹರಿದ್ವಾರ ಎಸ್‌ಪಿ ಸ್ವತಂತ್ರ ಸಿಂಗ್ ಹೇಳಿದ್ದಾರೆ.