ಮಹಿಳೆಯರು, ಎಂಎಸ್‍ಎಂಇ, ಅರೆಕಾಲಿಕ ನೌಕರರ ಸಮಸ್ಯೆಗಳಿಗೆ ಕಾಂಗ್ರೆಸ್ ಪ್ರಣಾಳಿಕೆ ಒತ್ತು?
ಹೊಸದಿಲ್ಲಿ: ಸೇವಾಕ್ಷೇತ್ರದ ಅರೆಕಾಲಿಕ ನೌಕರರಿಗೆ ಸಮಗ್ರ ಸಾಮಾಜಿಕ ಭದ್ರತಾ ಸುರಕ್ಷೆ ಒದಗಿಸುವುದು, ಸಣ್ಣ ವ್ಯವಹಾರಗಳಿಗೆ ಅನುಕೂಲವಾಗುವಂತೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ವ್ಯವಸ್ಥೆ ಪರಿಷ್ಕರಣೆ, ಕೇಂದ್ರೀಯ ಏಜೆನ್ಸಿಗಳ ಅಧಿಕಾರಕ್ಕೆ ಕಡಿವಾಣ ಹಾಕಲು ತಿದ್ದುಪಡಿ ಸೇರಿದಂತೆ ಹಲವು ಅಂಶಗಳು ಕಾಂಗ್ರೆಸ್‍ನ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿರುತ್ತವೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ ಎಂದು hindustantimes.com ವರದಿ ಮಾಡಿದೆ.
ದೇಶದ ಕಡುಬಡವ ಕುಟುಂಬಗಳ ಅತ್ಯಂತ ಹಿರಿಯ ಮಹಿಳೆಗೆ ಮಾಸಿಕ 6000 ರೂಪಾಯಿ ನೀಡುವ ನ್ಯುಂತಮ್ ಆಯಿ ಯೋಜನೆ (ಎನ್‍ವೈಎಐ)ಗೆ ಮರು ರೂಪ ನೀಡಲು ಕೂಡ ಪಕ್ಷ ಚಿಂತನೆ ನಡೆಸಿದೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಈ ಯೋಜನೆ ಪ್ರಕಟಿಸಿದರೂ, ಹೆಚ್ಚಿನ ಪ್ರಚಾರ ಪಡೆದಿರಲಿಲ್ಲ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸಮಿತಿ, ಪ್ರಸಕ್ತ ಚುನಾವಣಾ ಪ್ರಣಾಳಿಕೆಯ ಕರಡನ್ನು ಬುಧವಾರ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ನೀಡಿದೆ.
ಸಾರ್ವತ್ರಿಕ ಮೂಲ ಆದಾಯ ಯೋಜನೆಗೆ ಪಕ್ಷ ತನ್ನ ಬದ್ಧತೆಯನ್ನು ಪುನರುಚ್ಚರಿಸಲಿದೆ ಎಂದು ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯ ಹಿರಿಯ ಸದಸ್ಯರೊಬ್ಬರು ಸ್ಪಷ್ಟಪಡಿಸಿದ್ದಾರೆ. "ತಳಮಟ್ಟದ ಶೇಕಡ 20ರಷ್ಟು ಮಂದಿ ಮಾಸಿಕ 6000 ರೂಪಾಯಿಗಳ ಕನಿಷ್ಠ ಆದಾಯ ಪಡೆಯುವಂತಾಗಲು, ಕುಟುಂಬದ ಅತ್ಯಂತ ಹಿರಿಯ ಮಹಿಳೆಗೆ ಅದನ್ನು ನೀಡಲು ಉದ್ದೇಶಿಸಲಾಗಿದೆ" ಎಂದು ಅವರು ಹೇಳಿದ್ದಾರೆ.
ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಸಾಧ್ಯತೆಯ ಬಗ್ಗೆಯೂ ಪಕ್ಷ ಮುಕ್ತವಾಗಿದೆ ಎಂದು ಪ್ರಣಾಳಿಕೆ ಸಮಿತಿಯ ಮತ್ತೊಬ್ಬ ಸದಸ್ಯರು ಬಹಿರಂಗಪಡಿಸಿದ್ದಾರೆ.
ಹಕ್ಕು ಆಧರಿತ ಕಾನೂನು ಜಾರಿ ಮೂಲಕ ಅರೆಕಾಲಿಕ ನೌಕರರಿಗೆ ಸಾಮಾಜಿಕ ಸುರಕ್ಷೆ ಒದಗಿಸುವ ಪ್ರಸ್ತಾವ ಪಕ್ಷದ ಮುಂದಿದ್ದು, ಇದು ಪಿಂಚಣಿ, ಅಂಗವೈಕಲ್ಯ ಪಿಂಚಣಿ ಮತ್ತು ಜೀವವಿಮೆಯನ್ನು ಒಳಗೊಂಡಿರುತ್ತದೆ. ಕಳೆದ ವರ್ಷ ರಾಜಸ್ಥಾನ ಸಿಎಂ ಆ ರಾಜ್ಯದಲ್ಲಿ ಜಾರಿಗೆ ತಂದ ನಿಯಮಾವಳಿಯ ಆಧಾರದಲ್ಲಿ ಈ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಸಾಮಾಜಿಕ ಸುರಕ್ಷಾ ಯೋಜನೆಗೆ ಅರೆಕಾಲಿಕ ನೌಕರರು ಪುಟ್ಟ ಭಾಗವನ್ನು ನೀಡುವುದು ಕಡ್ಡಾಯವಾಗಿದ್ದು, ದೊಡ್ಡ ಪಾಲನ್ನು ಸರ್ಕಾರ ನೀಡುವುದು ಯೋಜನೆಯಲ್ಲಿ ಸೇರಿದೆ ಎಂದು ಯೋಜನೆ ಬಗ್ಗೆ ಅರಿವು ಹೊಂದಿರುವ ಮುಖಂಡರೊಬ್ಬರು ವಿವರಿಸಿದ್ದಾರೆ.