ದೇಶದಲ್ಲಿ ಶೇ. 82ರಷ್ಟು ಹಿಂದೂಗಳಿರುವಾಗ ‘ಹಿಂದೂ ರಾಷ್ಟ್ರ’ ಸ್ಥಾಪನೆ ಅಗತ್ಯವೇನಿದೆ: ಕಮಲ್‍ ನಾಥ್ ಪ್ರಶ್ನೆ

Update: 2023-08-08 14:17 GMT

ಕಮಲ್ ನಾಥ್.| Photo: PTI 

ಭೋಪಾಲ್ (ಮಧ್ಯಪ್ರದೇಶ): ದೇಶದಲ್ಲಿ ಶೇ. 82ರಷ್ಟು ಹಿಂದೂಗಳಿರುವಾಗ ‘ಹಿಂದೂ ರಾಷ್ಟ್ರ’ ಸ್ಥಾಪನೆ ಮಾಡಬೇಕಾದ ಅಗತ್ಯವೇನಿದೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಪ್ರಶ್ನಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಮಂಗಳವಾರ ರಾಜ್ಯ ರಾಜಧಾನಿ ಭೋಪಾಲ್‍ ನಲ್ಲಿರುವ ಪ್ರದೇಶ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಕಮಲ್ ನಾಥ್ ಮೇಲಿನಂತೆ ಹೇಳಿಕೆ ನೀಡಿದ್ದಾರೆ.

ಬಾಗೇಶ್ವರ ಧಾಮದ ಸ್ವಘೋಷಿತ ದೇವಮಾನವ ಧಿರೇಂದ್ರ ಶಾಸ್ತ್ರಿಯ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಬೇಕು ಎಂಬ ಬೇಡಿಕೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಶೇ. 82ರಷ್ಟು ಹಿಂದೂಗಳು ಇಲ್ಲಿರುವಾಗ ಹಿಂದೂ ರಾಷ್ಟ್ರವನ್ನಾಗಿಸುವ ಅಗತ್ಯವೇನಿದೆ? ದೇಶವೊಂದರಲ್ಲಿ ಇಷ್ಟು ಬೃಹತ್ ಪ್ರಮಾಣದ ಜನಸಂಖ್ಯೆ ಇರುವ ಸಮುದಾಯವಿರುವಾಗ, ಇದು ಚರ್ಚೆ ಮಾಡಬೇಕಾದ ಸಂಗತಿಯೆ? ಹಿಂದೂ ರಾಷ್ಟ್ರ ಎಂದು ಕರೆಯುವ ಅವಶ್ಯಕತೆ ಏನಿದೆ ಎಂಬ ಪ್ರಶ್ನೆಗೆ ಈ ಅಂಕಿ-ಸಂಖ್ಯೆಯಲ್ಲೇ ಉತ್ತರವಿದೆ” ಎಂದು ಪ್ರತ್ಯುತ್ತರ ನೀಡಿದ್ದಾರೆ.

ಇತ್ತೀಚೆಗೆ ಛಿಂದ್ವಾರಾದಲ್ಲಿ ನಡೆದ ಶಾಸ್ತ್ರಿಯವರ ಕಾರ್ಯಕ್ರಮದ ಕುರಿತು ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್, “ಅವರು (ಧಿರೇಂದ್ರ ಶಾಸ್ತ್ರಿ) ಛಿಂದ್ವಾರಾವನ್ನು ಅಪಾರವಾಗಿ ಪ್ರಶಂಸಿದ್ದಾರೆ. ಛಿಂದ್ವಾರಾದ ಜನರು ತುಂಬಾ ಖುಷಿಯಾಗಿದ್ದಾರೆ. ಆ ಕಾರ್ಯಕ್ರಮದಲ್ಲಿ 7ರಿಂದ 8 ಲಕ್ಷ ಮಂದಿ ಭಾಗವಹಿಸಿದ್ದರು. ಕಾರ್ಯಕ್ರಮದ ಎಲ್ಲ ಮೂರು ದಿನಗಳೂ ಯಶಸ್ವಿಯಾದವು” ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News