ದಿಲ್ಲಿಯಲ್ಲಿ ಎಸ್ಸಿ/ಎಸ್ಟಿ ವಿರುದ್ಧ ದೌರ್ಜನ್ಯ ಪ್ರಕರಣಗಳಲ್ಲಿ ಹೆಚ್ಚಳ
ಹೊಸದಿಲ್ಲಿ: ಕಳೆದ ಐದು ವರ್ಷಗಳಲ್ಲಿ ದಿಲ್ಲಿಯಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ವಿರುದ್ಧ ದೌರ್ಜನ್ಯಗಳಿಗೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಎಸ್ಸಿ/ಎಸ್ಟಿಗಳ ಕಲ್ಯಾಣ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಕಳವಳಗಳನ್ನು ವ್ಯಕ್ತಪಡಿಸಿದೆ.
2018ರಲ್ಲಿ ಕೇವಲ 36ರಷ್ಟಿದ್ದ ಇಂತಹ ಪ್ರಕರಣಗಳ ಸಂಖ್ಯೆ 2022ರಲ್ಲಿ 130ಕ್ಕೆ ತೀವ್ರವಾಗಿ ಏರಿಕೆಯಾಗಿದೆ ಎಂದು ಬೊಟ್ಟು ಮಾಡಿರುವ ಸಮಿತಿಯು,ಇಂತಹ ಪ್ರಕರಣಗಳ ತನಿಖೆಯಲ್ಲಿ ದಿಲ್ಲಿ ಪೊಲೀಸರ ವಿಳಂಬ ಮತ್ತು ಕಳಪೆತನದ ಬಗ್ಗೆ ದಿಗ್ಭ್ರಮೆಯನ್ನು ವ್ಯಕ್ತಪಡಿಸಿದೆ. ಕೆಲವು ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿಗಳನ್ನು ಕೂಡ ಸಲ್ಲಿಸಲಾಗಿಲ್ಲ ಎನ್ನುವುದನ್ನು ಗಮನಿಸಿರುವ ಅದು, ಕೇಂದ್ರ ಗೃಹ ಸಚಿವಾಲಯದಿಂದ ವಿವರಣೆಯನ್ನು ಕೇಳಿದೆ.
ದಿಲ್ಲಿಯಲ್ಲಿ ಎಸ್ಸಿ/ಎಸ್ಟಿ (ದೌರ್ಜನ್ಯಗಳ ತಡೆ) ಕಾಯ್ದೆಯಡಿ ಪ್ರಕರಣಗಳಲ್ಲಿ ದೋಷನಿರ್ಣಯದ ಪ್ರಮಾಣ ತೀರ ಕಡಿಮೆಯಾಗಿರುವುದನ್ನು ಸಮಿತಿಯು ಎತ್ತಿ ತೋರಿಸಿದೆ. ದಿಲ್ಲಿ ಸರಕಾರದಿಂದ ಮೀಸಲಾತಿ ನೀತಿ ಅನುಷ್ಠಾನ ಕುರಿತು ವರದಿಯಲ್ಲಿ ಸಮಿತಿಯು,ಇಂ ತಹ ಪ್ರಕರಣಗಳ ತನಿಖೆಯಲ್ಲಿ ಹೆಚ್ಚುತ್ತಿರುವ ವಿಳಂಬವನ್ನು ಬೊಟ್ಟು ಮಾಡಿದೆ.
ನ್ಯಾಯ ವಿಳಂಬವಾಗುತ್ತಿರುವ ಪ್ರಕರಣಗಳು ನೊಂದ ಎಸ್ಸಿ/ಎಸ್ಟಿ ವ್ಯಕ್ತಿಗಳಿ ಎದುರಿಸುತ್ತಿರುವ ಸಂಕಷ್ಟವನ್ನು ಮಾತ್ರ ಹೆಚ್ಚಿಸುತ್ತವೆ ಎಂದು ತನ್ನ ವರದಿಯಲ್ಲಿ ಹೇಳಿರುವ ಸಮಿತಿಯು, ವಿಚಾರಣೆಗೆ ಬಾಕಿಯಿರುವ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗಿದೆ ಎಂದು ತಿಳಿಸಿದೆ.
ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣಗಳು ಬಾಕಿಯುಳಿದಿರುವುದಕ್ಕೆ ಕಾರಣಗಳ ಜೊತೆಗೆ ಪ್ರಕರಣಗಳ ತನಿಖೆ ನಡೆಸಲು, ವಾದಿಸಲು ಮತ್ತು ಪ್ರಸ್ತುತಪಡಿಸಲು ಪ್ರಾಸಿಕ್ಯೂಷನ್ ‘ಪ್ರಾಮಾಣಿಕ ಪ್ರಯತ್ನಗಳ’ ಬಗ್ಗೆ ತನಗೆ ತಿಳಿಸುವಂತೆ ಸಮಿತಿಯು ತಾಕೀತು ಮಾಡಿದೆ.
ಕಳೆದ ವರ್ಷ ದಿಲ್ಲಿಯ ಸಮಾಜ ಕಲ್ಯಾಣ ಸಚಿವ ಸ್ಥಾನದಿಂದ ಕೆಳಗಿಳಿದಿರುವ ರಾಜೇಂದ್ರ ಪಾಲ್ ಗೌತಮ್ ಅವರು, ಇಂತಹ ಪ್ರಕರಣಗಳ ಹೆಚ್ಚಳಕ್ಕೆ ಎರಡು ಕಾರಣಗಳನ್ನು ಬೊಟ್ಟು ಮಾಡಿದರು.
ಮೊದಲನೆಯದು,ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದ ನಂತರ ದಲಿತರ ವಿರುದ್ಧ ದೌರ್ಜನ್ಯಗಳು ಹೆಚ್ಚಾಗಿರುವುದು ಮತ್ತು ಎರಡನೆಯದು ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಿರುವ ಸರ್ವೋಚ್ಚ ನ್ಯಾಯಾಲಯದ 2018ರ ಆದೇಶಕ್ಕೆ ಸಂಬಂಧಿಸಿದೆ ಎಂದು ಅವರು ಹೇಳಿದರು.
ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ದೇಶಾದ್ಯಂತ ಎಸ್ಸಿ/ಎಸ್ಟಿ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದ್ದವು. ವಿಪರ್ಯಾಸವೆಂದರೆ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೆಚ್ಚಿನ ಜನರಿಗೆ ಕಾಯ್ದೆಯ ಬಗ್ಗೆ ಅರಿವು ಮೂಡಿಸಲು ನೆರವಾಗಿರಬಹುದು ಎಂದ ಗೌತಮ್, 2018ರಲ್ಲಿ ಸಾವಿರಾರು ಯುವಜನರು ಬಂಧಿಸಲ್ಪಟ್ಟಿದ್ದ ಭಾರತ ಬಂದ್ನ ಪರಿಣಾಮವಾಗಿ ಜನರು ತಮ್ಮೆದುರಿನ ಪರಿಸ್ಥಿತಿಯ ಬಗ್ಗೆ ಹೆಚ್ಚು ಜಾಗ್ರತರಾಗಿದ್ದರು. ಹೆಚ್ಚೆಚ್ಚು ಪ್ರಕರಣಗಳು ದಾಖಲಾಗಲು ಇದೂ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.