ಪಕ್ಷದ ಚಿಹ್ನೆಗಳಿಂದ ಆಗುವ ಒಂದೇ ಒಂದು ಲಾಭದ ಕುರಿತು ವಿವರಿಸುವವರಿಗೆ ರೂ. 1 ಲಕ್ಷ ಬಹುಮಾನ ಘೋಷಿಸಿದ ಸ್ವತಂತ್ರ ಅಭ್ಯರ್ಥಿ!

Update: 2024-05-11 18:22 GMT

PC : indianexpress

ಪುಣೆ: "ಪಕ್ಷದ ಚಿಹ್ನೆಗಳಿಂದ ಆಗುವ ಒಂದೇ ಒಂದು ಲಾಭವನ್ನು ವಿವರಿಸುವ ಯಾವುದೇ ಭಾರತೀಯನಿಗೆ ನಾನು ಒಂದು ಲಕ್ಷ ರೂಪಾಯಿ ಬಹುಮಾನ ನೀಡಲಿದ್ದೇನೆ" ಎಂದು ಪುಣೆ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸಚಿನ್ ದತ್ತಾತ್ರೇಯ ಧಾಂಕುಡೆ ಘೋಷಿಸಿದ್ದಾರೆ.

ಪುಣೆ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ 49 ವರ್ಷದ ಸಚಿನ್ ದತ್ತಾತ್ರೇಯ ಧಾಂಕುಡೆ ಅವರಿಗೆ ನೀಡಲಾಗಿರುವ ಚಪ್ಪಲಿ ಚಿಹ್ನೆಯು ಇದೀಗ ಕ್ಷೇತ್ರದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ನಿಯಮಗಳನ್ನು ಉಲ್ಲೇಖಿಸಿರುವ ಸಚಿನ್ ದತ್ತಾತ್ರೇಯ ಧಾಂಕುಡೆ, ಈ ಚಿಹ್ನೆ ಚುನಾವಣಾ ಆಯೋಗ ನೀಡಿರುವುದೇ ಹೊರತು ನನ್ನ ಆಯ್ಕೆಯಲ್ಲ ಎಂದು ತಮ್ಮ ಜಾಹಿರಾತು ಫಲಕದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಮತದಾನಕ್ಕೆ ಇನ್ನು ಒಂದು ದಿನ ಮಾತ್ರ ಬಾಕಿಯುಳಿದಿರುವಾಗ ತಮ್ಮಿಬ್ಬರು ಬೆಂಬಲಿಗರೊಂದಿಗೆ ಪೌಡ್ ರಸ್ತೆಯಲ್ಲಿ ಧಾಂಕುಡೆ ಪ್ರಚಾರ ನಡೆಸುತ್ತಿದ್ದಾರೆ. ವಾಹನದ ಮೇಲಿರಿಸಲಾಗಿರುವ ನಾಲ್ಕು ಬದಿಯ ಚೌಕಟ್ಟು ಹೊಂದಿರುವ ಜಾಹಿರಾತು ಫಲಕಕ್ಕೆ ಹೊದಿಸಲಾಗಿರುವ ಬಟ್ಟೆಯ ತುಂಡೊಂದನ್ನು ಅವರ ಬೆಂಬಲಿಗರೊಬ್ಬರು ಎಳೆದು, ಧಾಂಕುಡೆಯವರ ಚಿಹ್ನೆಯನ್ನು ಪ್ರದರ್ಶಿಸಿದರು. ಮೈಕ್‌ನೊಂದಿಗೆ ದಾರಿಯುದ್ದಕ್ಕೂ ನಡೆದ ಧಾಂಕುಡೆ, "ಚುನಾವಣಾ ಚಿಹ್ನೆಗಳನ್ನು ನಿಷೇಧಿಸಿ, ಪ್ರಜಾಪ್ರಭುತ್ವವನ್ನು ರಕ್ಷಿಸಿ" ಎಂಬ ಘೋಷಣೆಗಳನ್ನು ಕೂಗಿದರು.

ಈ ಕುರಿತು The Indian Express ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, "ನಮಗೆ ಚುನಾವಣಾ ಚಿಹ್ನೆಗಳ ಅಗತ್ಯವಿಲ್ಲ ಎಂದು ನನ್ನ ಭಾವನೆ. ಅವನ್ನು ಪ್ರಥಮ ಚುನಾವಣೆಯಲ್ಲಿ ಪರಿಚಯಿಸಲಾಯಿತು. ಆ ಸಂದರ್ಭದಲ್ಲಿ ದೇಶದ ಜನಸಂಖ್ಯೆಯ ಶೇ. 85ರಷ್ಟು ಮಂದಿ ಅಶಿಕ್ಷಿತರಾಗಿದ್ದರು. ಆದರೆ ಇಂದು ಶೇ. 85ರಷ್ಟು ಜನಸಂಖ್ಯೆ ಶಿಕ್ಷಿತವಾಗಿದೆ. ಎಲ್ಲರನ್ನೂ ಅಶಿಕ್ಷಿತರು ಎಂದು ವರ್ಗೀಕರಿಸುವುದನ್ನು ಒಪ್ಪಲು ಸಾಧ್ಯವಿಲ್ಲ. ಓದು ಮತ್ತು ಬರಹ ಬಲ್ಲವರಿಗೆ ಪ್ರತ್ಯೇಕ ವಿದ್ಯುನ್ಮಾನ ಯಂತ್ರಗಳಿರಬೇಕು" ಎಂದು ಆಗ್ರಹಿಸಿದರು.

ಪಕ್ಷದ ಚಿಹ್ನೆಗಳು ಬದಲು ಮತಯಂತ್ರದ ಗುಂಡಿಯ ಪಕ್ಕದಲ್ಲಿ ಅಭ್ಯರ್ಥಿಯ ಹೆಸರು ಅಥವಾ ಭಾವಚಿತ್ರವಿರಬೇಕು ಎಂದು ಅವರು ಅಭಿಪ್ರಾಯ ಪಟ್ಟರು. ಇದಲ್ಲದೆ ಪಕ್ಷದ ಚಿಹ್ನೆಗಳಿಂದ ದೇಶ, ಸಮಾಜ ಹಾಗೂ ಪ್ರಜಾಪ್ರಭುತ್ವದ ಮೇಲೆ ಆಗುತ್ತಿರುವ 100 ಪ್ರತಿಕೂಲ ಪರಿಣಾಮಗಳ ಕುರಿತು ಅವರು ಕೃತಿಯೊಂದನ್ನೂ ರಚಿಸುತ್ತಿದ್ದಾರೆ.

ಧಾಂಕುಡೆ ಅವರ ಚುನಾವಣಾ ಚಿಹ್ನೆ ಚಪ್ಪಲಿಯಾಗಿದ್ದು, ಅವರ ಚುನಾವಣಾ ಜಾಹಿರಾತು ಫಲಕದಲ್ಲಿ ಹೀಗೆ ಬರೆಯಲಾಗಿದೆ: "ಹಾಲಿ ಪರಿಸ್ಥಿಯಿಂದ ಹತಾಶರಾಗಿರುವ ಪ್ರಜೆಗಳ ಪಾಲಿಗೆ ಚಪ್ಪಲಿ ಒಂದು ಅಸ್ತ್ರವಾಗಿದೆ. ಚಪ್ಪಲಿಯು ರಾಜಕೀಯ ನಾಟಕದಿಂದ ಬೇಸರಗೊಂಡಿರುವ ಮತದಾರರಿಗಾಗಿದೆ. ಚಪ್ಪಲಿಯು ಪುಣೆಯಲ್ಲಿನ ಸಂಚಾರ ದಟ್ಟಣೆ ಹಾಗೂ ಇನ್ನಿತರ ಸಮಸ್ಯೆಗಳಿಗಾಗಿದೆ. ಚಪ್ಪಲಿಯು ಯುವಕರ ನಿರುದ್ಯೋಗದ ಪ್ರತಿಬಿಂಬವಾಗಿದೆ".

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News