ಇಂಡಿಯಾ ಮೈತ್ರಿಕೂಟ 11 ಕ್ಯಾಪ್ಟನ್‌ ಗಳಿರುವ ಕ್ರಿಕೆಟ್‌ ತಂಡದಂತಿದೆ : ಬಿಜೆಪಿ ಸಂಸದೆ ವ್ಯಂಗ್ಯ

Update: 2024-02-02 14:17 GMT

ಬಿಜೆಪಿ ಸಂಸದೆ ಹೀನಾ ಗಾವಿತ್ | Photo: X \ @DrHeena_Gavit

ಹೊಸದಿಲ್ಲಿ: ಇಂಡಿಯಾ ಮೈತ್ರಿಕೂಟವು ಇತರ ಆಟಗಾರರಿಗೆ ಅವಕಾಶ ನೀಡದ 11 ಕ್ಯಾಪ್ಟನ್ ಗಳಿರುವ ಕ್ರಿಕೆಟ್ ತಂಡದಂತಿದೆ ಎಂದು ಶುಕ್ರವಾರ ಬಣ್ಣಿಸುವ ಮೂಲಕ ಬಿಜೆಪಿ ಸಂಸದೆ ಹೀನಾ ಗಾವಿತ್ ಅವರು ಪ್ರತಿಪಕ್ಷಗಳನ್ನು ವ್ಯಂಗ್ಯವಾಡಿದರು.

ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಚರ್ಚೆಯನ್ನಾರಂಭಿಸಿದ ಅವರು, ಇಂಡಿಯಾ ಮೈತ್ರಿಕೂಟದ ನಾಯಕರು ಒಂದೇ ಸೂರಿನಡಿ ವಾಸಿಸುವ ‘ಬಿಗ್ ಬಾಸ್’ಸ್ಪರ್ಧಿಗಳಂತಿದ್ದಾರೆ, ಆದರೆ ಪ್ರತಿಯೊಬ್ಬರೂ ಪ್ರಧಾನಿಯಾಗುವ ’ಟ್ರೋಫಿ ’ಯ ಮೇಲೆ ಕಣ್ಣಿಟ್ಟಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಡಿ ದೇಶವು ಸರ್ವಾಂಗೀಣ ಅಭಿವೃದ್ಧಿಯನ್ನು ನೋಡುತ್ತಿದೆ. ಹೀಗಾಗಿ ಇಂಡಿಯಾ ಮೈತ್ರಿಕೂಟದ ನಾಯಕರು ಒಬ್ಬರ ಬಳಿಕ ಒಬ್ಬರಂತೆ ನಿಷ್ಠೆಯನ್ನು ಬದಲಿಸಿದರೆ ಅಚ್ಚರಿಯೇನಿಲ್ಲ ಎಂದು  ಹೇಳಿದರು.

ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಯವರನ್ನು ಪಶ್ಚಿಮ ಬಂಗಾಳದ ಕ್ಯಾಪ್ಟನ್ ಎಂದು ಬಣ್ಣಿಸಿದ ಗಾವಿತ್, ಅವರು ತನ್ನ ತಂಡದಲ್ಲಿ ಕಾಂಗ್ರೆಸನ್ನು ಸೇರಿಸಿಕೊಳ್ಳಲು ಸಿದ್ಧರಿಲ್ಲ. ಇದೇ ರೀತಿ ಆಪ್ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ಪಂಜಾಬಿನ ಕ್ಯಾಪ್ಟನ್ ಆಗಿದ್ದು ಕಾಂಗ್ರೆಸನ್ನು ತಂಡದ 12ನೇ ಆಟಗಾರನಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದರು.

ಗಾವಿತ್ ಲೋಕಸಭೆಯಲ್ಲಿ ಮಹಾರಾಷ್ಟ್ರದ ನಂದೂರಬಾರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News