ಭಾರತವು ವಲಸಿಗರನ್ನು ಸ್ವಾಗತಿಸದ ‘ಅನ್ಯದ್ವೇಷಿ’ ದೇಶಗಳಲ್ಲಿ ಸೇರಿದೆ : ಅಮೆರಿಕ ಅಧ್ಯಕ್ಷ ಬೈಡೆನ್
ಹೊಸದಿಲ್ಲಿ: ಭಾರತ, ಜಪಾನ್, ಚೀನಾ ಮತ್ತು ರಶ್ಯಾ ವಲಸಿಗರನ್ನು ಸ್ವಾಗತಿಸದ ‘ಅನ್ಯದ್ವೇಷಿ’ ದೇಶಗಳಾಗಿವೆ ಮತ್ತು ಇದೇ ಕಾರಣದಿಂದ ಅವುಗಳ ಆರ್ಥಿಕತೆಗಳು ತನ್ನ ದೇಶದಂತೆ ಬೆಳೆಯುತ್ತಿಲ್ಲ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ.
ಬುಧವಾರ ವಾಷಿಂಗ್ಟನ್ನಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಬೈಡೆನ್, ‘ನಿಮಗೆ ಗೊತ್ತೇ, ನಮ್ಮ ಆರ್ಥಿಕತೆ ಬೆಳೆಯುತ್ತಿರುವುದಕ್ಕೆ ಕಾರಣಗಳಲ್ಲಿ ನೀವು ಮತ್ತು ಅನೇಕ ಇತರರು ಒಂದಾಗಿದ್ದಾರೆ. ಏಕೆಂದರೆ ನಾವು ವಲಸಿಗರನ್ನು ಸ್ವಾಗತಿಸುತ್ತೇವೆ. ಚೀನಾ ಏಕೆ ಆರ್ಥಿಕವಾಗಿ ಅಷ್ಟೊಂದು ಹಿಂದೆ ಬಿದ್ದಿದೆ? ಜಪಾನ್,ರಶ್ಯಾ ಮತ್ತು ಭಾರತ ಏಕೆ ತೊಂದರೆಯಲ್ಲಿವೆ? ಏಕೆಂದರೆ ಅವು ಅನ್ಯದ್ವೇಷಿಗಳಾಗಿವೆ,ಪರಕೀಯರನ್ನು ದ್ವೇಷಿಸುತ್ತವೆ. ಅವು ವಲಸಿಗರನ್ನು ಬಯಸುವುದಿಲ್ಲ’ ಎಂದು ಹೇಳಿದರು.
ಗುರುವಾರ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ ಶ್ವೇತಭವನವು, ಅಧ್ಯಕ್ಷರು ಸ್ಥೂಲ ಹೇಳಿಕೆಯನ್ನು ನೀಡಿದ್ದಾರೆ ಮತ್ತು ಅವರು ತನ್ನ ಮಿತ್ರದೇಶಗಳನ್ನು ಗೌರವಿಸುತ್ತಾರೆ ಎಂದು ತಿಳಿಸಿದೆ.
ಅಧ್ಯಕ್ಷರು ತಮ್ಮನ್ನು ಎಷ್ಟೊಂದು ಗೌರವಿಸುತ್ತಾರೆ ಎನ್ನುವುದು ನಮ್ಮ ಮಿತ್ರರಿಗೆ ಮತ್ತು ಪಾಲುದಾರರಿಗೆ ತಿಳಿದಿದೆ ಎಂದು ಹೇಳಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರೆ ಅವರು, ನಿಸ್ಸಂಶಯವಾಗಿ ನಾವು ಭಾರತ ಮತ್ತು ಜಪಾನ್ ಜೊತೆ ಬಲವಾದ ಸಂಬಂಧಗಳನ್ನು ಹೊಂದಿದ್ದೇವೆ. ಕಳೆದ ಮೂರು ವರ್ಷಗಳತ್ತ ನೀವು ದೃಷ್ಟಿ ಹರಿಸಿದರೆ ಅಧ್ಯಕ್ಷರು ಖಂಡಿತವಾಗಿಯೂ ಈ ರಾಜತಾಂತ್ರಿಕ ಸಂಬಂಧಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದಾರೆ ಎಂದು ತಿಳಿಸಿದರು.
ಚೀನಾ ಮತ್ತು ರಶ್ಯಾ ಅಮೆರಿಕದೊಂದಿಗೆ ಬಲವಾದ ದ್ವಿಪಕ್ಷೀಯ ಸಂಬಂಧಗಳನ್ನು ಹೊಂದಿಲ್ಲ. ಆದಾಗ್ಯೂ ಮಾನವ ಹಕ್ಕುಗಳ ಮೌಲ್ಯಗಳ ಕುರಿತು ಭಿನ್ನಾಭಿಪ್ರಾಯಗಳಿದ್ದರೂ ಭಾರತವನ್ನು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ತನ್ನ ನಿರ್ಣಾಯಕ ವ್ಯೆಹಾತ್ಮಕ ಪಾಲುದಾರನೆಂದು ಅಮೆರಿಕವು ಪರಿಗಣಿಸಿದೆ.
ಅಮೆರಿಕ ಸರಕಾರವು ಎ.22ರಂದು ಪ್ರಕಟಿಸಿದ ವಾರ್ಷಿಕ ವರದಿಯಲ್ಲಿ ಕಾನೂನು ಬಾಹಿರ ಹತ್ಯೆಗಳು,ಕಾನೂನು ಜಾರಿ ಸಂಸ್ಥೆಗಳು ವಶಕ್ಕೆ ತೆಗೆದುಕೊಂಡ ವ್ಯಕ್ತಿಗಳ ನಾಪತ್ತೆ ಪ್ರಕರಣಗಳು,ನಿರಂಕುಶ ಬಂಧನಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಹಾಗೂ ಪತ್ರಕರ್ತರ ಮೇಲೆ ಕಣ್ಗಾವಲು ಸೇರಿದಂತೆ ಭಾರತದಲ್ಲಿ ಗಮನಾರ್ಹ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಬೆಟ್ಟು ಮಾಡಿತ್ತು.