ಪ್ರಧಾನಿ ಮೋದಿಯೊಂದಿಗೆ ವೇದಿಕೆ ಹಂಚಿಕೊಳ್ಳಲಿರುವ ಶರದ್ ಪವಾರ್: INDIA ಮೈತ್ರಿಕೂಟದ ನಾಯಕರ ಅಸಮಾಧಾನ

Update: 2023-07-29 08:26 GMT

ಶರದ್ ಪವಾರ್ (PTI)

ಮುಂಬೈ: ಆಗಸ್ಟ್ 25 ಹಾಗೂ 26ರಂದು ಭಾರತೀಯ ರಾಷ್ಟ್ರೀಯ ಪ್ರಗತಿಪರ ಐಕ್ಯತಾ ಮೈತ್ರಿಕೂಟ(INDIA)ದ ಮೂರನೆಯ ಸಭೆಯು ಮುಂಬೈನಲ್ಲಿ ನಿಗದಿಯಾಗಿರುವಾಗಲೇ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ(ಎನ್‌ಸಿಪಿ)ದ ವರಿಷ್ಠ ಶರದ್ ಪವಾರ್ ಅವರು ಆಗಸ್ಟ್ 1ರಂದು ಪುಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿರುವುದರ ಕುರಿತು ಈ ಮೈತ್ರಿಕೂಟದ ನಾಯಕರು ಕಳವಳ ಶುಕ್ರವಾರ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ನಡೆದ INDIA ಮೈತ್ರಿಕೂಟದ ಪ್ರಮುಖ ನಾಯಕರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೋಕಮಾನ್ಯ ತಿಲಕ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತಿರುವ ಕಾರ್ಯಕ್ರಮದಲ್ಲಿ ಶರದ್ ಪವಾರ್ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿರುವುದರ ವಿರುದ್ಧ ಕೆಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು thenewsminute.com ವರದಿ ಮಾಡಿದೆ.

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎನ್‌ಸಿಪಿ ನಾಯಕನೊಂದಿಗೆ ಮಾತುಕತೆ ನಡೆಸಿ, ಆ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಮನವಿ ಮತ್ತು ಒತ್ತಡ ಹೇರಬೇಕು ಎಂಬ ಸಲಹೆಗಳು ಕೇಳಿ ಬಂದಿವೆ ಎಂದು ವರದಿಯಾಗಿದೆ.

2024ರ ಲೋಕಸಭಾ ಚುನಾವಣೆಯಲ್ಲಿ ಸಮಾನಮನಸ್ಕ ಪಕ್ಷಗಳು ಬಿಜೆಪಿ ವಿರುದ್ಧ ಒಗ್ಗೂಡಲು ಮುಂದಾಗುತ್ತಿರುವಾಗ ಶರದ್ ಪವಾರ್ ಅವರು ಪ್ರಧಾನಿಯೊಂದಿಗೆ ವೇದಿಕೆ ಹಂಚಿಕೊಳ್ಳುವುದರಿಂದ INDIA ಮೈತ್ರಿಕೂಟದ ಕುರಿತು ಕೆಟ್ಟ ಚಿತ್ರಣ ರವಾನೆಯಾಗಲಿದೆ ಎಂಬ ಅಭಿಪ್ರಾಯವನ್ನು INDIA ಮೈತ್ರಿಕೂಟದ ನಾಯಕರು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿಯು INDIA ಮೈತ್ರಿಕೂಟವನ್ನು ಈಸ್ಟ್ ಇಂಡಿಯಾ ಕಂಪನಿ ಹಾಗೂ ಇಂಡಿಯನ್ ಮುಜಾಹಿದೀನ್ ಸಂಘಟನೆಗೆ ಹೋಲಿಸಿ ದಾಳಿ ಮಾಡಿರುವಾಗ, ಪವಾರ್ ಅವರು ನರೇಂದ್ರ ಮೋದಿಯೊಂದಿಗೆ ವೇದಿಕೆ ಹಂಚಿಕೊಳ್ಳುವುದರಿಂದ ಸಾಕಷ್ಟು ಪರಿಶ್ರಮಪಟ್ಟು ರಚಿಸಲಾಗಿರುವ INDIA ಮೈತ್ರಿಕೂಟದ ವರ್ಚಸ್ಸಿಗೆ ಧಕ್ಕೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದೂ ಮೂಲಗಳು ಹೇಳಿವೆ.

ತಿಲಕ್ ಸ್ಮಾರಕ್ ಮಂದಿರ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮಕ್ಕೆ ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಶರದ್ ಪವಾರ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಈ ನಡುವೆ, ಆಗಸ್ಟ್ 25 ಹಾಗೂ 26ರಂದು ಮುಂಬೈನಲ್ಲಿ INDIA ಮೈತ್ರಿಕೂಟದ ಮೂರನೆ ಸಭೆಯು ಆಯೋಜನೆಗೊಂಡಿದ್ದು, ಈ ಸಭೆಯ ಆತಿಥ್ಯವನ್ನು ಶಿವ ಸೇನೆ (ಉದ್ಧವ್ ಠಾಕ್ರೆ ಬಣ) ಹಾಗೂ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ವಹಿಸಿಕೊಂಡಿವೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News