ದೇಶದಲ್ಲಿ ಜುಲೈನಲ್ಲಿ ವಾಡಿಕೆಗಿಂತ ಶೇ.9ರಷ್ಟು ಹೆಚ್ಚು ಮಳೆ : ಭಾರತೀಯ ಹವಾಮಾನ ಇಲಾಖೆ
Update: 2024-08-01 16:51 GMT
ಹೊಸದಿಲ್ಲಿ : ದೇಶದಲ್ಲಿ ಜುಲೈ ತಿಂಗಳಿನಲ್ಲಿ ವಾಡಿಕೆಗಿಂತ ಶೇ.9ರಷ್ಟು ಮತ್ತು ಮಧ್ಯಭಾರತದಲ್ಲಿ ಶೇ.33ರಷ್ಟು ಅಧಿಕ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಗುರುವಾರ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಎಂಡಿ ಮುಖ್ಯಸ್ಥ ಮೃತ್ಯುಂಜಯ ಮೊಹಾಪಾತ್ರಾ ಅವರು, ಕೃಷಿಗಾಗಿ ಮುಂಗಾರು ಮಳೆಯನ್ನೇ ಹೆಚ್ಚಾಗಿ ಅವಲಂಬಿಸಿರುವ ಮಧ್ಯಭಾರತದಲ್ಲಿ ಸತತ ಮೂರು ವರ್ಷಗಳಿಂದ ಉತ್ತಮ ಮಳೆಯಾಗುತ್ತಿದೆ. ಇದು ಕೃಷಿಗೆ ಪೂರಕವಾಗಿದೆ ಎಂದು ತಿಳಿಸಿದರು.
ಐಎಂಡಿ ದತ್ತಾಂಶಗಳಂತೆ ಪೂರ್ವ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ಭಾರತದ ಭಾಗಗಳಲ್ಲಿ ಗಣನೀಯ ಮಳೆ ಕೊರತೆಯಾಗಿದೆ. ಹರ್ಯಾಣ, ಪಂಜಾಬ್, ಹಿಮಾಚಲ ಪ್ರದೇಶ ಹಾಗೂ ಜಮ್ಮು-ಕಾಶ್ಮೀರದಲ್ಲಿ ವಾಡಿಕೆಗಿಂತ ಶೇ.35ರಿಂದ ಶೇ.45ರಷ್ಟು ಕಡಿಮೆ ಮಳೆಯಾಗಿದೆ.