ಮಾಲ್ಡೀವ್ಸ್‌ನಲ್ಲಿರುವ ತನ್ನ ರಾಯಭಾರಿ ಕಚೇರಿ ಕುರಿತ ಮಾದ್ಯಮ ವರದಿ ನಕಲಿ ಎಂದ ಭಾರತ
ಹೊಸದಿಲ್ಲಿ: ಮಾಲ್ಡೀವ್ಸ್‌ನಲ್ಲಿರುವ ಅನಿವಾಸಿ ಸಮುದಾಯ ಹಾಗೂ ರಾಯಭಾರಿ ಕಚೇರಿ ಅಧಿಕಾರಿಗಳಿಗೆ ಕಿರುಕುಳ ನೀಡುವ ಹಾಗೂ ಬೆದರಿಕೆ ಒಡ್ಡುವ ಉದ್ದೇಶದಿಂದ ಕೆಲವು ಸ್ಥಳೀಯ ಮಾಧ್ಯಮ ಸಂಸ್ಥೆಗಳು ಸುಳ್ಳು ಸುದ್ದಿ ಹರಡುತ್ತಿವೆ ಎಂದು ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಹೇಳಿದ್ದಾರೆ.
‘‘ಭಾರತ ಹಾಗೂ ಮಾಲ್ಡೀವ್ಸ್ ನಡುವಿನ ಸ್ನೇಹ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಲು ಮಾಲ್ಡೀವ್ಸ್ ಸಾರ್ವಜನಿಕರಲ್ಲಿ ದ್ವೇಷ ಹಾಗೂ ಭೀತಿಯ ವಾತಾವರಣವನ್ನು ಸೃಷ್ಟಿಸುವ ಉದ್ದೇಶದಿಂದ ಈ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ’’ ಎಂದು ರಾಯಭಾರಿ ಕಚೇರಿ ಶುಕ್ರವಾರ ನೀಡಿದ ಪತ್ರಿಕಾ ಹೇಳಿಕೆ ತಿಳಿಸಿದೆ.
ಭಾರತ ಹಾಗೂ ಮಾಲ್ಡೀವ್ಸ್‌ನ ನಡುವಿನ ಸಂಬಂಧ ಪರಸ್ಪರ ನಂಬಿಕೆ ಹಾಗೂ ಗೌರವದ ಆಧಾರದಲ್ಲಿ ನಿಂತಿದೆ ಎಂದು ರಾಯಭಾರಿ ಕಚೇರಿ ಗಮನ ಸೆಳೆದಿದೆ.
‘‘ಮಾಧ್ಯಮ ವ್ಯಕ್ತಿಗಳ ಸುಳ್ಳು ಸುದ್ದಿ ಹರಡುವಂತಹ ಬೇಜವಾಬ್ದಾರಿಯುತ ನಡೆಯನ್ನು ಕಟುವಾಗಿ ಖಂಡಿಸಬೇಕಾಗಿದೆ’’ ಎಂದು ಭಾರತೀಯ ರಾಯಭಾರಿ ಕಚೇರಿ ಹೇಳಿದೆ. ‘‘ಪತ್ರಿಕೋದ್ಯಮದ ಹೆಸರಿನಲ್ಲಿ ಇಂತಹ ಸುಳ್ಳು ಸುದ್ದಿಗಳನ್ನು ನಿರ್ಲಜ್ಜವಾಗಿ ಪ್ರಸಾರ ಮಾಡುವ ಕುರಿತು ಮಾಲ್ಡೀವ್ಸ್ ಆಡಳಿತ ತನಿಖೆ ನಡೆಸಬೇಕು ಎಂದು ನಾವು ಕರೆ ನೀಡುತ್ತೇವೆ’’ ಎಂದು ಅವರು ಹೇಳಿದ್ದಾರೆ.
ಮಾಲ್ಡೀವ್ಸ್ ಸರಕಾರ ಭಾರತದೊಂದಿಗೆ ಅಂತಹ ಭೇಟಿ ನಡೆಸಿರುವುದನ್ನು ಅಥವಾ ಸಾಲಕ್ಕೆ ಮಾನವಿ ಮಾಡಿರುವುದನ್ನು ಅಮೀರ್ ಅವರು ನಿರಾಕರಿಸಿದ್ದಾರೆ.
ಭಾರತದಿಂದ ಸುಮಾರು 1,620 ಕೋಟಿ ರೂ. ಸಾಲ ಕೋರಲು ತಾನು ಮಾಲ್ಡೀವ್ಸ್‌ನಲ್ಲಿ ಭಾರತೀಯ ರಾಯಭಾರಿ ಅಧಿಕಾರಿಗಳನ್ನು ಭೇಟಿಯಾಗಿದ್ದೇನೆ ಎಂದು ಪ್ರತಿಪಾದಿಸುವ ವರದಿಯನ್ನು ಮಾಲ್ಡೀವ್ಸ್‌ನ ಹಣಕಾಸು ಸಚಿವ ಇಬ್ರಾಹೀಂ ಅಮೀರ್ ಅವರು ನಿರಾಕರಿಸಿದ ಒಂದು ದಿನದ ಬಳಿಕ ಭಾರತೀಯ ರಾಯಭಾರಿ ಕಚೇರಿ ಈ ಹೇಳಿಕೆ ನೀಡಿದೆ.
ಮಾಲ್ಡೀವ್ಸ್ ಸರಕಾರ ಭಾರತದೊಂದಿಗೆ ನಡೆಸಿದ ಅಂತಹ ಯಾವುದೇ ಸಭೆ ಹಾಗೂ ಸಾಲ ನೀಡುವಂತೆ ಮನವಿ ಮಾಡಿರುವುದನ್ನು ಅಮೀರ್ ನಿರಾಕರಿಸಿದ್ದಾರೆ.