ಭಾರತ ಫೆಲೆಸ್ತೀನ್ ಜನತೆಯ ಪರವಾಗಿಯೂ ನಿಲ್ಲಬೇಕು: ಶಶಿ ತರೂರ್
ಹೊಸದಿಲ್ಲಿ : ಹಮಾಸ್ ಸಂಘಟನೆಯು ಫೆಲೆಸ್ತೀನೀಯರನ್ನು ಪ್ರತಿನಿಧಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಬುಧವಾರ ಹೇಳಿದ್ದಾರೆ.
‘‘ಇಸ್ರೇಲ್ ಯುದ್ಧಕ್ಕೆ ಸಂಬಂಧಿಸಿ ಕೇಂದ್ರ ಸರಕಾರದ ನಿಲುವು ಪರಿಪೂರ್ಣವಾಗಿಲ್ಲ. ಭಾರತವು ಫೆಲೆಸ್ತೀನ್ ಜನತೆಯ ಪರವಾಗಿಯೂ ನಿಲ್ಲಬೇಕಾಗಿದೆ. ಫೆಲೆಸ್ತೀನ್ ವಿಷಯವನ್ನು ದೇಶ ಮರೆಯಬಾರದು’’ ಎಂದು ಎನ್ ಡಿ ಟಿವಿಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದರು.
ಇತ್ತೀಚೆಗೆ, ಕಾಂಗ್ರೆಸ್ ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಮಿತಿಯಾಗಿರುವ ಕಾಂಗ್ರೆಸ್ ಕ್ರಿಯಾ ಸಮಿತಿ (ಸಿಡಬ್ಲ್ಯುಸಿ)ಯು ಹಮಾಸ್-ಇಸ್ರೇಲ್ ಸಂಘರ್ಷದ ಬಗ್ಗೆ ‘‘ಹತಾಶೆ ಮತ್ತು ದುಃಖ’’ ವ್ಯಕ್ತಪಡಿಸಿತ್ತು. ಅದೇ ವೇಳೆ, ಜಮೀನು ಮತ್ತು ಸ್ವರಾಜ್ಯವನ್ನು ಹೊಂದುವ ಹಾಗೂ ಘನತೆ ಮತ್ತು ಗೌರವದಿಂದ ಬದುಕುವ ಫೆಲೆಸ್ತೀನೀಯರ ಹಕ್ಕುಗಳನ್ನೂ ಎತ್ತಿ ಹಿಡಿಯಬೇಕು ಎಂದು ಅದು ಹೇಳಿತ್ತು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಬಿಜೆಪಿ, ಕಾಂಗ್ರೆಸ್ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಮತ್ತು ‘‘ಅಲ್ಪಸಂಖ್ಯಾತ ಮತ ಬ್ಯಾಂಕ್ ರಾಜಕೀಯಕ್ಕೆ ಅದು ಒತ್ತೆಸೆರೆಯಾಗಿದೆ’’ ಎಂದು ಆರೋಪಿಸಿತ್ತು.