ಮೊದಲ ಅಪಾಚೆ ಹೆಲಿಕಾಪ್ಟರ್ಗಳನ್ನು ನಿಯೋಜಿಸಲು ಭಾರತೀಯ ಸೇನೆ ಸಿದ್ಧತೆ
ಹೊಸದಿಲ್ಲಿ: ಮೊದಲ ಎಎಚ್-64ಇ ಅಪಾಚೆ ದಾಳಿ ಹೆಲಿಕಾಪ್ಟರ್ಗಳನ್ನು ಮರುಭೂಮಿ ವಲಯದಲ್ಲಿ 2024 ಫೆಬ್ರವರಿ ಬಳಿಕ ನಿಯೋಜಿಸಲು ಭಾರತೀಯ ಸೇನೆ ಸಿದ್ಧತೆ ನಡೆಸುತ್ತಿದೆ.
ಅದೇ ವೇಳೆ, 156 ಸ್ವದೇಶಿ ಹಗುರ ಯುದ್ಧ ಹೆಲಿಕಾಪ್ಟರ್ (ಎಲ್ಸಿಎಚ್)ಗಳಿಗೆ ಗುತ್ತಿಗೆ ನೀಡುವ ಪ್ರಕ್ರಿಯೆಯನ್ನು ರಕ್ಷಣಾ ಖರೀದಿ ಸಮಿತಿ (ಡಿಎಸಿ)ಯು ಮುಂದಿನ ವಾರ ಕೈಗೆತ್ತಿಕೊಳ್ಳಲಿದೆ.
‘‘ಮೊದಲ ಅಪಾಚೆ ಹೆಲಿಕಾಪ್ಟರ್ 2024 ಫೆಬ್ರವರಿಯಲ್ಲಿ ಲಭಿಸುವ ನಿರೀಕ್ಷೆಯಿದೆ. ಕರಾರಿನ ಪ್ರಕಾರ, ಆರು ಪೈಲಟ್ಗಳು ಮತ್ತು 24 ತಂತ್ರಜ್ಞಾನಿಗಳಿಗೆ ಬೋಯಿಂಗ್ ಕಂಪೆನಿಯು ಅಮೆರಿಕದಲ್ಲಿ ತರಬೇತಿ ನೀಡಿದೆ. ಎಲ್ಲಾ ಆರು ಅಪಾಚೆ ಹೆಲಿಕಾಪ್ಟರ್ಗಳನ್ನು 2024 ಎಪ್ರಿಲ್ ವೇಳೆಗೆ ಬೋಯಿಂಗ್ ಕಂಪೆನಿಯು ಪೂರೈಸಲಿದೆ’’ ಎಂದು ರಕ್ಷಣಾ ಮೂಲವೊಂದು ತಿಳಿಸಿದೆ.
ಡಿಎಸಿಯು ಮುಂದಿನ ವಾರ ಸಭೆ ಸೇರುವ ನಿರೀಕ್ಷೆಯಿದ್ದು, 156 ಹಗುರ ಯುದ್ಧ ಹೆಲಿಕಾಪ್ಟರ್ಗಳ ಖರೀದಿ ಬಗ್ಗೆ ನಿರ್ಧಾರವೊಂದನ್ನು ತೆಗೆದುಕೊಳ್ಳಲಿದೆ. ಈ ಪೈಕಿ 90 ಹೆಲಿಕಾಪ್ಟರ್ಗಳು ಭೂಸೇನೆಯ ಬಳಕೆಗಾದರೆ, 66 ಹೆಲಿಕಾಪ್ಟರ್ಗಳನ್ನು ಭಾರತೀಯ ವಾಯುಪಡೆ ಬಳಸಲಿದೆ. ಇದು ಸುಮಾರು 45,000 ಕೋಟಿ ರೂ. ಮೊತ್ತದ ಗುತ್ತಿಗೆಯಾಗಿದೆ.
ಆರ್ಮಿ ಏವಿಯೇಶನ್ ತನ್ನ ಮೊದಲ ದಾಳಿ ಹೆಲಿಕಾಪ್ಟರ್ ಆಗಿ ಎಲ್ಸಿಎಚನ್ನು ನಿಯೋಜಿಸಿದೆ. ಈ ಹೆಲಿಕಾಪ್ಟರ್ಗಳನ್ನು ಒಳಗೊಂಡ ಮೊದಲ ತುಕಡಿ 351 ಆರ್ಮಿ ಏವಿಯೇಶನ್ನ್ನು ಕಳೆದ ವರ್ಷದ ನವೆಂಬರ್ನಲ್ಲಿ ಪೂರ್ವ ವಲಯದಲ್ಲಿರುವ ಅಸ್ಸಾಮ್ನ ಮಿಸ್ಸಮಾರಿಗೆ ಕಳುಹಿಸಲಾಗಿದೆ. ಅದು ಅಲ್ಲಿ ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ)ಯ ಸಮೀಪ ಕಾರ್ಯ ನಿರ್ವಹಿಸುತ್ತಿದೆ.
ಅಮೆರಿಕದಿಂದ ಮೂವತ್ತೊಂಭತ್ತು ಎಎಚ್-64 ಅಪಾಚೆ ದಾಳಿ ವಿಮಾನಗಳನ್ನು ಖರೀದಿಸಲು ಸಂಪುಟ ಸಮಿತಿಯು ಅನಮೋದನೆ ನೀಡಿತ್ತು. ಬಳಿಕ, ಭಾರತೀಯ ವಾಯು ಪಡೆಯು 2015 ಸೆಪ್ಟಂಬರ್ನಲ್ಲಿ ಸಹಿ ಹಾಕಲಾದ ಒಪ್ಪಂದದ ಅನ್ವಯ 22 ಅಪಾಚೆ ಹೆಲಿಕಾಪ್ಟರ್ಗಳನ್ನು ಪಡೆಯಿತು. ಬಳಿಕ, ಮುಂದೆ ಪಡೆಯಲಾಗುವ ಅಪಾಚೆ ಹೆಲಿಕಾಪ್ಟರ್ಗಳು ಭಾರತೀಯ ಸೇನೆಗೆ ಸೇರಬೇಕು ಎಂದು ಸರಕಾರ ನಿರ್ಧರಿಸಿತು. ಅದರ ಪ್ರಕಾರ, 2020 ಫೆಬ್ರವರಿಯಲ್ಲಿ ಸುಮಾರು 6,653 ಕೋಟಿ ರೂ. ವೆಚ್ಚದಲ್ಲಿ ಇನ್ನೂ ಆರು ಅಪಾಚೆ ಹೆಲಿಕಾಪ್ಟರ್ಗಳಿಗೆ ಭಾರತ ಬೇಡಿಕೆ ಸಲ್ಲಿಸಿತು. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಅಪಾಚೆ ಹೆಲಿಕಾಪ್ಟರ್ಗಳ ಪೂರೈಕೆಯಲ್ಲಿ ಸ್ವಲ್ಪ ವಿಳಂಬವಾಗಿದೆ.