ಸುರಂಗ ಕುಸಿತ: ರಕ್ಷಣಾ ಕಾರ್ಯಾಚರಣೆಗಿಳಿದ ಭಾರತೀಯ ಸೇನೆ

Update: 2023-11-26 08:42 GMT

ಹೊಸದಿಲ್ಲಿ: ಸುರಂಗದಲ್ಲಿನ ರಕ್ಷಣಾ ಕಾರ್ಯಾಚರಣೆಗೆ ಬಳಸಲಾಗುತ್ತಿದ್ದ ಬೃಹತ್ ರಂಧ‍್ರ ಕೊರೆಯುವ ಯಂತ್ರಕ್ಕೆ ಹಾನಿಯಾಗಿರುವುದರಿಂದ, ಕಳೆದ 15 ದಿನಗಳಿಂದ ಸಿಲ್ಕ್ಯಾರಾ ಸುರಂಗ ಮಾರ್ಗದಲ್ಲಿ ಸಿಲುಕಿಕೊಂಡಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಗೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಹೀಗಾಗಿ ಭಾರತೀಯ ಸೇನೆಯು ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದ್ದು, ಮಾನವ ಶಕ್ತಿ ಬಳಸಿಕೊಂಡು ರಂಧ‍್ರ ಕೊರೆಯುವ ಗುರಿಯನ್ನು ಅದಕ್ಕೆ ನೀಡಲಾಗಿದೆ ಎಂದು ndtv.com ವರದಿ ಮಾಡಿದೆ.

ಸಿಲ್ಕ್ಯಾರಾ ಸುರಂಗದ ಅವಶೇಷಗಳನ್ನು ಕೊರೆಯುತ್ತಿದ್ದ ರಂಧ್ರ ಕೊರೆಯುವ ಯಂತ್ರದ ಬ್ಲೇಡ್ ಗಳು ಅವಶೇಷಗಳ ನಡುವೆ ಸಿಲುಕಿಕೊಂಡಿವೆ. ಈ ಬೃಹತ್ ಯಂತ್ರವನ್ನು ಸುಮಾರು 60 ಮೀಟರ್ ದೂರವನ್ನು ಕೊರೆಯಲು ಅಮೆರಿಕಾದಿಂದ ತರಿಸಲಾಗಿತ್ತು. ಆದರೆ, ಶುಕ್ರವಾರ ಈ ಯಂತ್ರಕ್ಕೆ ಹಾನಿಯಾಗಿದ್ದು, ಅದನ್ನು ಹೊರ ತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಕೊನೆಯ 10-15 ಮೀಟರ್ ಕೈಯಲ್ಲಿ ಹಿಡಿದುಕೊಳ್ಳುವ ರಂಧ್ರ ಕೊರೆಯುವ ಯಂತ್ರವನ್ನು ಬಳಸಿಕೊಂಡು ಕೊರೆಯಬೇಕಾಗಿದೆ ಎಂದೂ ಅವರು ಹೇಳಿದ್ದಾರೆ.

ಈ ಮಾನವ ಶಕ್ತಿ ಬಳಸಿಕೊಂಡು ರಂಧ‍್ರ ಕೊರೆಯುವ ಕಾರ್ಯಾಚರಣೆಯಲ್ಲಿ ಓರ್ವ ವ್ಯಕ್ತಿ ರಕ್ಷಣಾ ಕಿಂಡಿಯ ಒಳ ಹೊಕ್ಕು ನಿರ್ದಿಷ್ಟ ಅವಧಿವರೆಗೆ, ನಿಗದಿತ ಸ್ಥಳವನ್ನು ಕೊರೆಯುತ್ತಾರೆ. ಆ ವ್ಯಕ್ತಿ ಅಲ್ಲಿಂದ ಹೊರ ಬಂದ ನಂತರ, ಮತ್ತೊಬ್ಬರು ಆ ಕೆಲಸವನ್ನು ಮುಂದುವರಿಸುತ್ತಾರೆ. ಭಾರತೀಯ ಸೇನೆಯು ಈ ಮಾನವ ಶಕ್ತಿ ಆಧಾರಿತ ರಂಧ‍್ರ ಕೊರೆಯುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲಿದೆ.

ರವಿವಾರ ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡಲು ಮದ್ರಾಸ್ ಸ್ಯಾಪರ್ಸ್ ನ ಒಂದು ಘಟಕ ಹಾಗೂ ಭಾರತೀಯ ಸೇನೆಯ ಕಾರ್ಪ್ಸ್ ಆಫ್ ಎಂಜಿನಿಯರ್ಸ್ ನ ಒಂದು ಗುಂಪು ಸ್ಥಳಕ್ಕೆ ಧಾವಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News