10 ವರ್ಷಗಳಲ್ಲಿ 905 ಬಿಲಿಯನ್ ಡಾ‌ಲರ್‌ಗಳಿಗೆ ತ್ರಿಗುಣಗೊಂಡ ಭಾರತೀಯ ಬಿಲಿಯಾಧಿಪತಿಗಳ ಸಂಪತ್ತು: ವರದಿ

Update: 2024-12-07 12:11 GMT

ಸಾಂದರ್ಭಿಕ ಚಿತ್ರ | PC : freepik

 ಹೊಸದಿಲ್ಲಿ: ಭಾರತದ ಬಿಲಿಯಾಧಿಪತಿಗಳ ಒಟ್ಟು ನಿವ್ವಳ ಮೌಲ್ಯ 2024ಕ್ಕೆ ಇದ್ದಂತೆ 10 ವರ್ಷಗಳ ಅವಧಿಯಲ್ಲಿ ತ್ರಿಗುಣಗೊಂಡು 905.6 ಶತಕೋಟಿ ಡಾಲರ್‌ಗಳಷ್ಟಾಗಿದ್ದು,ಇದರೊಂದಿಗೆ ದೇಶವು ಏಶ್ಯಾ-ಫೆಸಿಪಿಕ್ ಪ್ರದೇಶದಲ್ಲಿ ಸಂಪತ್ತು ಸೃಷ್ಟಿಯ ಹಾಟ್‌ಸ್ಪಾಟ್ ಆಗಿ ಹೊರಹೊಮ್ಮಿದೆ. ಬಿಲಿಯಾಧಿಪತಿಗಳ ಒಟ್ಟು ಸಂಪತ್ತಿನ ಪಟ್ಟಿಯಲ್ಲಿ ಭಾರತವೀಗ ಅಮೆರಿಕ ಮತ್ತು ಚೀನಾ ನಂತರ ತೃತೀಯ ಸ್ಥಾನದಲ್ಲಿದೆ ಎಂದು ಇತ್ತೀಚಿನ ಯುಬಿಎಸ್(ಯೂನಿಯನ್ ಬ್ಯಾಂಕ್ ಆಫ್ ಸ್ವಿಟ್ಝರ್‌ಲಂಡ್) ವರದಿಯು ಎತ್ತಿ ತೋರಿಸಿದೆ.

ಭಾರತೀಯ ಬಿಲಿಯಾಧಿಪತಿಗಳ ಒಟ್ಟು ಸಂಪತ್ತು 2023ರಲ್ಲಿದ್ದ 637.1 ಶತಕೋಟಿ ಡಾಲರ್ ಗಳಿಂದ 2024ರಲ್ಲಿ ಶೇ.42ರಷ್ಟು ಗಣನೀಯ ಏರಿಕೆಯನ್ನು ದಾಖಲಿಸಿದ್ದು,‌ ಇದು ಜಾಗತಿಕ ಸರಾಸರಿಯನ್ನು ಮೀರಿಸಿದೆ ಮತ್ತು ಕುಟುಂಬ ನೇತೃತ್ವದ ಉದ್ಯಮಗಳು ಮತ್ತು ಸರಕಾರದ ರಚನಾತ್ಮಕ ಸುಧಾರಣೆಗಳಿಂದಾಗಿ ಭಾರತದ ತ್ವರಿತ ಆರ್ಥಿಕ ಪರಿವರ್ತನೆಯನ್ನು ಪ್ರತಿಬಿಂಬಿಸಿದೆ.

ಕಳೆದೊಂದು ದಶಕದಲ್ಲಿ ಭಾರತದಲ್ಲಿ ಬಿಲಿಯಾಧಿಪತಿಗಳ ಸಂಖ್ಯೆ 185ಕ್ಕೇರಿದ್ದು (ಶೇ.123ರಷ್ಟು ಹೆಚ್ಚಳ), ಇದು ಔಷಧಿಗಳು,ಶಿಕ್ಷಣ ತಂತ್ರಜ್ಞಾನ ಮತ್ತು ಹಣಕಾಸು ತಂತ್ರಜ್ಞಾನದಂತಹ ವಲಯಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಉದ್ಯಮಶೀಲತೆಯ ಮನೋಭಾವದ ಮೇಲೆ ಬೆಳಕು ಚೆಲ್ಲಿದೆ ಎಂದು ಯುಬಿಎಸ್ ವರದಿಯು ಹೇಳಿದೆ.

ಭಾರತೀಯ ಬಿಲಿಯಾಧಿಪತಿಗಳ ಸಂಪತ್ತು ಏರಿಕೆಯಲ್ಲಿ ಕುಟುಂಬ ಒಡೆತನದ ಉದ್ಯಮಗಳು ಪ್ರಮುಖ ಪಾತ್ರವನ್ನು ವಹಿಸಿವೆ ಎಂದು ಯುಬಿಎಸ್ ಬೆಟ್ಟು ಮಾಡಿದೆ. ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ಮಾಲಕತ್ವದ ಉದ್ಯಮಗಳು ಶೇರು ಮಾರುಕಟ್ಟೆಗಳಲ್ಲಿ ಲಿಸ್ಟ್ ಆಗಿರುವುದು ಬೆಳೆಯುತ್ತಿರುವ ಸಂಪತ್ತಿಗೆ ಗಮನಾರ್ಹ ಕೊಡುಗೆಯನ್ನು ನೀಡುತ್ತಿದೆ.

ಭಾರತವು ವಿಶ್ವದ ಉನ್ನತ ಆರ್ಥಿಕತೆಗಳ ಸಾಲಿಗೆ ಸೇರಲು ಸಜ್ಜಾಗಿದ್ದು, ಅದು ಹಲವಾರು ತಲೆಮಾರುಗಳಿಂದ ಬೆಳೆದು ಬಂದಿರುವ ಸಾರ್ವಜನಿಕವಾಗಿ ಲಿಸ್ಟ್ ಹಾಗಿರುವ ಕುಟುಂಬ ಒಡೆತನದ ಉದ್ಯಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿದೆ ಎಂದು ಯುಬಿಎಸ್ ಹೇಳಿದೆ. ಶೇರು ಮಾರುಕಟ್ಟೆಯ ನಾಗಾಲೋಟವು ಈ ಕುಟುಂಬ ಒಡೆತನದ ಸಂಪತ್ತು ವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಎನ್‌ಎಸ್‌ಇ ನಿಫ್ಟಿ 500 ಸೂಚ್ಯಂಕವು ಕಳೆದ ಹತ್ತು ವರ್ಷಗಳಲ್ಲಿ ಅಮೆರಿಕನ್ ಡಾಲರ್‌ಗಳ ಲೆಕ್ಕದಲ್ಲಿ ದುಪ್ಪಟ್ಟಿಗಿಂತ ಹೆಚ್ಚಾಗಿದ್ದು,ಇದು ಬಿಲಿಯಾಧಿಪತಿ ಕುಟಂಬಗಳ ಸಂಪತ್ತಿನಲ್ಲಿ ಅಗಾಧ ಏರಿಕೆಯನ್ನು ಬಿಂಬಿಸುತ್ತಿದೆ.

ಭಾರತದಲ್ಲಿ ನಗರೀಕರಣ ಮತ್ತು ಡಿಜಿಟಲೀಕರಣ ಮುಂದುವರಿದಿದ್ದು, ಭಾರತೀಯ ಬಿಲಿಯಾಧಿಪತಿಗಳ ಸಂಪತ್ತು ವೃದ್ಧಿಯ ಪ್ರವೃತ್ತಿಯೂ ಮುಂದುವರಿಯಲಿದೆ ಎಂದು ಯುಬಿಎಸ್ ನಿರೀಕ್ಷಿಸಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News