ಇನ್ನು ಮುಂದೆ ರಾಮ ಲಲ್ಲಾ ಟೆಂಟಿನಲ್ಲಿರುವುದಿಲ್ಲ, ಅವನಿಗಾಗಿ ಭವ್ಯ ಮಂದಿರವಿದೆ: ಪ್ರಧಾನಿ ಮೋದಿ

Update: 2024-01-22 10:34 GMT

ಪ್ರಧಾನಿ ನರೇಂದ್ರ ಮೋದಿ (Photo: PTI)

ಅಯ್ಯೋಧ್ಯೆ: ಅಯೋಧ್ಯೆಯಲ್ಲಿ ಇಂದು ನೂತನ ಶ್ರೀ ರಾಮ ಮಂದಿರದಲ್ಲಿ ರಾಮ ಲಲ್ಲಾನ ದಿವ್ಯ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸಿ ನಂತರ ದೇವಳದ ಹೊರಗೆ ನೆರೆದಿದ್ದ ಗಣ್ಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ನ್ಯಾಯಾಂಗಕ್ಕೂ ತಮ್ಮ ಧನ್ಯವಾದ ಸಲ್ಲಿಸಿದರು.

“ಇಲ್ಲಿ ಶ್ರೀ ರಾಮ ದೇವರ ನೆಲೆಯ ಕುರಿತಂತೆ ಇದ್ದ ಕಾನೂನು ಹೋರಾಟ ದಶಕಗಳ ಕಾಲ ಸಾಗಿತು. ಈ ಕುರಿತಂತೆ ನ್ಯಾಯ ಒದಗಿಸಿದ ಭಾರತದ ನ್ಯಾಯಾಂಗಕ್ಕೂ ನಾನು ಧನ್ಯವಾದ ತಿಳಿಸಲು ಬಯಸುತ್ತೇನೆ,” ಎಂದು ಪ್ರಧಾನಿ ಹೇಳಿದರು.

ಹಲವಾರು ವರ್ಷಗಳ ಕಾಯುವಿಕೆಯ ನಂತರ ಇದು ತಮಗೊಂದು ಭಾವುಕ ಕ್ಷಣ ಎಂದ ಪ್ರಧಾನಿ “ರಾಮ್‌ ಲಲ್ಲಾ ಕೊನೆಗೂ ಅಯೋಧ್ಯೆಗೆ ಆಗಮಿಸಿದ್ಧಾರೆ. ರಾಮ್‌ ಲಲ್ಲಾ ಇನ್ನು ಟೆಂಟಿನಲ್ಲಿರುವುದಿಲ್ಲ, ಅವರಿಗಾಗಿ ಈ ಭವ್ಯ ದೇವಳ ನಿರ್ಮಾಣವಾಗಿದೆ,” ಎಂದು ಪ್ರಧಾನಿ ಹೇಳಿದರು.

“ಸಾವಿರ ವರ್ಷಗಳ ನಂತರವೂ ಜನರು ಇಂದಿನ ದಿನ ಹಾಗೂ ಇಂದಿನ ಸಮಾರಂಭವನ್ನು ನೆನಪಿಸಿಕೊಳ್ಳುತ್ತಾರೆ. ಕಳೆದ 11 ದಿನಗಳಲ್ಲಿ ನಾನು ಶ್ರೀ ರಾಮ ಕಾಲಿರಿಸಿದ ಹಲವಾರು ಸ್ಥಳಗಳಿಗೆ ಭೇಟಿ ನೀಡಿದ್ದೇನೆ,” ಎಂದು ಅವರು ಹೇಳಿದರು.

ದೇವಳದ ಪ್ರತಿಷ್ಠಾಪನೆಗೆ ಇಷ್ಟು ಶತಮಾನಗಳು ತೆಗೆದುಕೊಂಡಿದ್ದಕ್ಕಾಗಿ ಈ ದಿನ ಶೀ ರಾಮನ ಬಳಿ ಕ್ಷಮೆ ಯಾಚಿಸಲು ಬಯಸುತ್ತೇನೆ ಎಂದು ಅವರು ಹೇಳಿದರು.

“ನಮ್ಮ ಪ್ರಯತ್ನ, ತ್ಯಾಗ ಮತ್ತು ತಪಸ್ಸಿನಲ್ಲಿ ಏನೋ ಕೊರತೆಯಿದ್ದಿರಬೇಕು, ಆ ಕಾರಣ ಇಷ್ಟು ಶತಮಾನಗಳ ಕಾಲ ಈ ಕೆಲಸ ನಮಗೆ ಮಾಡಲಾಗಲಿಲ್ಲ. ಇಂದು ಆ ಕೆಲಸ ಪೂರ್ಣಗೊಂಡಿದೆ. ಶ್ರೀ ರಾಮ ದೇವರು ಇಂದು ನಮ್ಮನ್ನು ಖಂಡಿತಾ ಕ್ಷಮಿಸುವರು ಎಂದು ನಾನು ನಂಬಿದ್ದೇನೆ,” ಎಂದು ಮೋದಿ ಹೇಳಿದರು.

“ಜನವರಿ 22ರ ಸೂರ್ಯೋದಯ ಹೊಸ ಕಾಂತಿಯಿಂದ ಕಂಗೊಳಿಸಿದೆ, ಇದು ಕೇವಲ ಒಂದು ತಾರೀಕು ಮಾತ್ರ ಅಲ್ಲ ಒಂದು ಹೊಸ ಯುಗದ ಆರಂಭ,” ಎಂದು ಪ್ರಧಾನಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News