ಉಷ್ಣ ಮಾರುತದ ದಾಳಿಗೆ ತತ್ತರಿಸಿದವರಲ್ಲಿ ಭಾರತೀಯರೇ ಅಧಿಕ ; ಅಧ್ಯಯನ ವರದಿ

Update: 2024-06-28 15:49 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಹವಾಮಾನ ಬದಲಾವಣೆಯಿಂದಾಗಿ ಜೂನ್ 16 ಮತ್ತು 24ರ ನಡುವೆ ಉದ್ಭವಿಸಿರುವ ಭೀಕರ ಉಷ್ಣಮಾರುತದ ದಾಳಿಗೆ ಭಾರತದ 61.9 ಕೋಟಿ ಜನರು ತತ್ತರಿಸಿದ್ದಾರೆ ಎಂದು ಅಮೆರಿಕದ ಜನ ಸೇವಾ ಸಂಸ್ಥೆ ‘ಕ್ಲೈಮೇಟ್ ಸೆಂಟ್ರಲ್’ನ ಅಧ್ಯಯನ ವರದಿಯೊಂದು ತಿಳಿಸಿದೆ. ಉಷ್ಣ ಮಾರುತ ದಾಳಿ ಸಂತ್ರಸ್ತರ ಸಂಖ್ಯೆಯಲ್ಲಿ ಭಾರತವು ಮೊದಲ ಸ್ಥಾನದಲ್ಲಿದೆ.

ಎರಡನೇ ಸ್ಥಾನದಲ್ಲಿರುವ ಚೀನಾದಲ್ಲಿ, ಇದೇ ಅವಧಿಯಲ್ಲಿ 57.9 ಕೋಟಿ ಜನರು ಉಷ್ಣಮಾರುತದ ದಾಳಿಗೆ ಗುರಿಯಾಗಿದ್ದಾರೆ. 23.1 ಕೋಟಿ ಜನರು ನಲುಗಿರುವ ಇಂಡೋನೇಶ್ಯ, 20.6 ಕೋಟಿ ಜನರು ತತ್ತರಿಸಿರುವ ನೈಜೀರಿಯ ಮತ್ತು 17.6 ಕೋಟಿ ಜನರು ಸಂತ್ರಸ್ತರಾಗಿರುವ ಬ್ರೆಝಿಲ್ ನಂತರದ ಸ್ಥಾನಗಳಲ್ಲಿವೆ.

‘‘ಜೂನ್ 16 ಮತ್ತು 24ರ ನಡುವಿನ ಉಷ್ಣಮಾರುತವು ಭಾರತದ ಅತ್ಯಂತ ತೀವ್ರ ಮತ್ತು ಸುದೀರ್ಘ ಉಷ್ಣಮಾರುತಗಳ ಪೈಕಿ ಒಂದಾಗಿದೆ. ಈ ಅವಧಿಯಲ್ಲಿ ದೇಶದಲ್ಲಿ 40,000ಕ್ಕೂ ಅಧಿಕ ಜನರು ಬಿಸಿಲಾಘಾತಕ್ಕೆ ಒಳಗಾದರು. ಅವರ ಪೈಕಿ 100ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡರು’’ ಎಂದು ಅಧ್ಯಯನ ತಿಳಿಸಿದೆ. ‘‘ಉಷ್ಣತೆಯು ಹಗಲಲ್ಲಿ 50 ಡ್ರಿ ಸೆಲ್ಸಿಯಸ್ ತಲುಪಿತ್ತು. ಅದೂ ಅಲ್ಲದೆ, ರಾತ್ರಿ ಕಾಲದ ಕನಿಷ್ಠ ಉಷ್ಣತೆಯೇ 37 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಇದು ಭಾರತದಲ್ಲಿ ಈವರೆಗೆ ದಾಖಲಾಗಿರುವ ಉಷ್ಣತೆಯಲ್ಲಿ ಗರಿಷ್ಠ ಎನ್ನಲಾಗಿದೆ’’ ಎಂದು ಗುರುವಾರ ಬಿಡುಗಡೆಗೊಂಡಿರುವ ಅಧ್ಯಯನ ವರದಿ ಹೇಳಿದೆ.

ಜೂನ್ ತಿಂಗಳ ಈ ಒಂಭತ್ತು ದಿನಗಳ ಅವಧಿಯಲ್ಲಿ ದಾಖಲಾದ ಭೀಕರ ಉಷ್ಣತೆಗೆ ಜಗತ್ತಿನಲ್ಲಿ ಸುಮಾರು 500 ಕೋಟಿ ಜನರು ನಲುಗಿದರು ಎಂದು ‘ಅನಾಲಿಸಿಸ್: ಗ್ಲೋಬಲ್ ಎಕ್ಸ್ಟ್ರೀಮ್ ಹೀಟ್ ಇನ್ ಜೂನ್ 2024’ ಎಂಬ ಹೆಸರಿನ ವರದಿ ಹೇಳುತ್ತದೆ. ಇದು ಜಾಗತಿಕ ಜನಸಂಖ್ಯೆಯ 60 ಶೇಕಡಕ್ಕೂ ಅಧಿಕವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News