ಭಾರತದ ಆರ್ಥಿಕ ಬೆಳವಣಿಗೆ ದರ 6.1 ಶೇಕಡಕ್ಕೆ ಹೆಚ್ಚಳ: ಐಎಂಎಫ್ ಮುನ್ನಂದಾಜು

Update: 2023-07-26 17:20 GMT

Photo: PTI

ಹೊಸದಿಲ್ಲಿ,ಜು.25:ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಂಸ್ಥೆಯು 2023-24ನೇ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ದರವನ್ನು 6.1 ಶೇಕಡಕ್ಕೆ ಹೆಚ್ಚಿಸಿದೆ. ಈ ಮೊದಲು ಐಎಂಎಫ್ ಪ್ರಸಕ್ತ ವಿತ್ತ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರವು 5.9 ಶೇಕಡದಷ್ಟಿರುವುದಾಗಿ ಅಂದಾಜಿಸಿತ್ತು.

, 2023ರ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆಯು ನಿರೀಕ್ಷೆಗಿಂತ ಪ್ರಬಲವಾದ ವೇಗವನ್ನು ಪಡೆದುಕೊಂಡಿರುವುದು ಭಾರತದ ಆರ್ಥಿಕ ಬೆಳವಣಿಗೆಯ ಮುನ್ನಂದಾಜಿನ ಪರಿಷ್ಕರಣೆಗೆ ಕಾರಣವಾಗಿದೆ ಎಂದು ಐಎಂಎಫ್ ಪ್ರಕಟಿಸಿದ ಜಾಗತಿಕ ಆರ್ಥಿಕ ಹೊರನೋಟ ವರದಿ ತಿಳಿಸಿದೆ.

ಆದಾಗ್ಯೂ ಐಎಂಎಫ್ನ ಈ ಮುನ್ನಂದಾಜು, 2023-24ನೇ ಸಾಲಿನ ವಿತ್ತೀಯ ವರ್ಷದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಅಂದಾಜಿಸಿದ್ದ 6.5 ಶೇಕಡ ಆರ್ಥಿಕ ಬೆಳವಣಿಗೆದರಕ್ಕಿಂತ ಕಡಿಮೆಯಿದೆ.

2023-24ನೇ ಸಾಲಿನ ಜಾಗತಿಕ ಮಟ್ಟದ ವಾಸ್ತವಿಕ ಒಟ್ಟು ಆಂತರಿಕ ಉತ್ಪನ್ನದ ಬೆಳವಣಿಗೆ ದರದಲ್ಲಿ 3 ಶೇಕಡ ಏರಿಕೆಯಾಗಲಿದೆ ಎಂದು ಐಎಂಎಫ್ನ ಈ ವರದಿ ಅಂದಾಜಿಸಿದೆ. ಈ ಬೆಳವಣಿಗೆ ದರವು ಎಪ್ರಿಲ್ ತಿಂಗಳಲ್ಲಿ ಅಂದಾಜಿಸಿದ್ದ 2.8 ಶೇಕಡಕ್ಕಿಂತ 0.2ರಷ್ಟು ಅಧಿಕವಾಗಿದೆ. 2024ನೇ ಸಾಲಿನಲ್ಲಿಯೂ ಜಾಗತಿಕ ಬೆಳವಣಿಗೆ ದರವು 3 ಶೇಕಡದಲ್ಲಿಯೇ ಉಳಿದುಕೊಳ್ಳಲಿದೆ ಎಂದು ವರದಿ ಹೇಳಿದೆ.

2023-24ನೇ ಸಾಲಿನಲ್ಲಿ ಅಮೆರಿಕದ ಆರ್ಥಿಕ ಬೆಳವಣಿಗೆ ದರವು ಕುಂಠಿತವಾಗಲಿದ್ದು, ಶೇ.1.8 ಆಗುವುದು ವರದಿಯು ಅಂದಾಜಿಸಿದೆ. 2022-23ನೇ ಸಾಲಿನಲ್ಲಿ ಅಮೆರಿಕದ ಆರ್ಥಿಕ ಬೆಳವಣಿಗೆ ದರವು 2.1 ಶೇಕಡ ಆಗಿತ್ತು. ಬ್ರಿಟನ್ನ ಆರ್ಥಿಕ ಬೆಳವಣಿಗೆಯೂ ಪ್ರಸಕ್ತ ವಿತ್ತೀಯ ವರ್ಷದಲ್ಲಿ ತೀವ್ರ ಕುಸಿತವನ್ನು ಕಾಣಲಿದೆ. 2022ರಲ್ಲಿ 4.1 ಶೇಕಡದಷ್ಟಿದ್ದ ಬ್ರಿಟನ್ನ ಆರ್ಥಿಕ ಬೆಳವಣಿಗೆದರವು 2023ನೇ ಸಾಲಿನಲ್ಲಿ 0.4 ಶೇಕಡಕ್ಕೆ ಇಳಿಕೆಯಾಗಲಿದೆ ಎಂದು ವರದಿ ಹೇಳಿದೆ.

ಇತ್ತ ಚೀನಾದ ಆರ್ಥಿಕತೆಯ ಬೆಳವಣಿಗೆ ದರ 2022-23ನೇ ಸಾಲಿನಲ್ಲಿ 3.0 ಶೇಕಡದಷ್ಟಿದ್ದುದು, 2023-24ನೇ ಸಾಲಿನಲ್ಲಿ 5.2 ಶೇಕಡಕ್ಕೆ ಹೆಚ್ಚಲಿದೆ ಎಂದು ವರದಿ ಹೇಳಿದೆ.

ಕೋವಿಡ್19 ಸೃಷ್ಟಿಸಿದ್ದ ಆರೋಗ್ಯದ ಬಿಕ್ಕಟ್ಟು ಅಧಿಕೃತವಾಗಿ ಕೊನೆಗೊಂಡಿದೆ. ಪೂರೈಕೆ ಸರಪಣಿಯಲ್ಲಿ ಉಂಟಾಗಿದ್ದ ಅಡಚಣೆಯು, ಸಾಂಕ್ರಾಮಿಕ ಹಾವಳಿ ಪೂರ್ವದ ಹಂತಗಳಿಗೆ ಮರಳಿದೆ ಎಂದು ವರದಿ ಹೇಳಿದೆ.

ಸವಾಲುದಾಯಕ ಪರಿಸ್ಥಿತಿಯ ಹೊರತಾಗಿಯೂ ವರ್ಷದ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ಚೇತರಿಕೆ ಕಂಡುಬಂದಿದೆ.ಕಾರ್ಮಿಕ ಮಾರುಕಟ್ಟೆಯೂ ಬಲಗೊಂಡಿದೆ ಎಂದು ಐಎಂಎಫ್ ವರದಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News