ಭಾರತದಲ್ಲಿ ವೇಗವಾಗಿ ಹೆಚ್ಚುತ್ತಿರುವ ಹಿರಿಯರ ಜನಸಂಖ್ಯೆ 2050ರ ವೇಳೆಗೆ ಮಕ್ಕಳನ್ನೂ ಮೀರಲಿದೆ: ವರದಿ

Update: 2023-09-27 15:50 GMT

ಸಾಂದರ್ಭಿಕ ಚಿತ್ರ | Photo: PTI 

ಹೊಸದಿಲ್ಲಿ: ಭಾರತದಲ್ಲಿ ಹಿರಿಯರ ಜನಸಂಖ್ಯೆಯು ಅಭೂತಪೂರ್ವ ಪ್ರಮಾಣದಲ್ಲಿ ಹೆಚ್ಚುತ್ತಿದೆ ಮತ್ತು 2050ರ ವೇಳೆಗೆ ಮಕ್ಕಳ ಜನಸಂಖ್ಯೆಯನ್ನೂ ಮೀರಬಹುದು ಎಂದು ವಿಶ್ವಸಂಸ್ಥೆ ಜನಸಂಖ್ಯಾ ನಿಧಿ (ಯುಎನ್ಎಫ್ಪಿಎ)ಯ ನೂತನ ವರದಿಯು ಹೇಳಿದೆ. ಮುಂಬರುವ ದಶಕಗಳಲ್ಲಿ ಯಂಗ್ ಇಂಡಿಯಾ ವೇಗವಾಗಿ ವಯಸ್ಸಾಗುತ್ತಿರುವ ಸಮಾಜವಾಗಿ ಬದಲಾಗಲಿದೆ ಎಂದು ಅದು ಒತ್ತಿ ಹೇಳಿದೆ. ಭಾರತವು ಅತ್ಯಂತ ಹೆಚ್ಚಿನ ಹದಿಹರೆಯದವರು ಮತ್ತು ಯುವಜನರನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ.

ರಾಷ್ಟ್ರೀಯ ಮಟ್ಟದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಹಿರಿಯರ (60+ ವರ್ಷಗಳು) ಪಾಲು 2021ರಲ್ಲಿದ್ದ ಶೇ.10.1ರಿಂದ 2036ರಲ್ಲಿ ಶೇ.15ಕ್ಕೆ ಮತ್ತು 2050ರಲ್ಲಿ ಶೇ.20.8ಕ್ಕೆ ಹೆಚ್ಚಲಿದೆ ಎಂದು ಯುಎನ್ಎಫ್ಪಿಎ ತನ್ನ ‘ಇಂಡಿಯಾ ಏಜಿಂಗ್ ರಿಪೋರ್ಟ್ 2023’ರಲ್ಲಿ ಅಂದಾಜಿಸಿದೆ.

ಶತಮಾನದ ಅಂತ್ಯದ ವೇಳೆಗೆ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.36ಕ್ಕೂ ಅಧಿಕ ವಯಸ್ಸಾದವರು ಇರಲಿದ್ದಾರೆ. 2010ರಿಂದ ಹಿರಿಯರ ಜನಸಂಖ್ಯೆಯಲ್ಲಿ ತೀವ್ರ ಬೆಳವಣಿಗೆಯನ್ನು ಗಮನಿಸಲಾಗಿದೆ, ಇದೇ ವೇಳೆ 15 ವರ್ಷಕ್ಕಿಂತ ಕೆಳಗಿನ ವಯೋಗುಂಪಿನ ಜನಸಂಖ್ಯೆಯಲ್ಲಿ ಕುಸಿತ ಕಂಡು ಬಂದಿದೆ. ಇದು ಭಾರತದಲ್ಲಿ ವಯಸ್ಸಾಗುವಿಕೆಯ ವೇಗವನ್ನು ಸೂಚಿಸುತ್ತದೆ ಎಂದು ವರದಿಯು ಹೇಳಿದೆ.

2050ಕ್ಕೆ ನಾಲ್ಕು ವರ್ಷಗಳ ಮುನ್ನ ಭಾರತದಲ್ಲಿ ವಯಸ್ಸಾದವರ ಜನಸಂಖ್ಯೆಯು 0-14 ವರ್ಷ ವಯೋಗುಂಪಿನ ಮಕ್ಕಳಿಗಿಂತ ಹೆಚ್ಚಿರಲಿದೆ. ಆ ವೇಳೆಗೆ ಜನಸಂಖ್ಯೆಯಲ್ಲಿ 15ರಿಂದ 59 ವರ್ಷದವರ ಪಾಲು ಸಹ ಕಡಿಮೆಯಾಗಲಿದೆ. ನಿಸ್ಸಂಶಯವಾಗಿ ಮುಂಬರುವ ದಶಕಗಳಲ್ಲಿ ತುಲನಾತ್ಮಕ ಯಂಗ್ ಇಂಡಿಯಾ ವೇಗವಾಗಿ ವಯಸ್ಸಾಗುತ್ತಿರುವ ಸಮಾಜವಾಗಿ ಬದಲಾಗಲಿದೆ ಎಂದು ವರದಿಯು ತಿಳಿಸಿದೆ.

ದಕ್ಷಿಣದಲ್ಲಿಯ ಹೆಚ್ಚಿನ ರಾಜ್ಯಗಳು ಹಾಗೂ ಹಿಮಾಚಲ ಪ್ರದೇಶ ಮತ್ತು ಪಂಜಾಬ್ಗಳಂತಹ ಉತ್ತರ ಭಾರತದ ಆಯ್ದ ರಾಜ್ಯಗಳು 2021ರಲ್ಲಿ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ವಯಸ್ಸಾದವರ ಜನಸಂಖ್ಯೆಯನ್ನು ವರದಿ ಮಾಡಿವೆ, ಈ ಅಂತರವು 2036ರ ವೇಳೆಗೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ ಎಂದು ಹೇಳಿರುವ ವರದಿಯು, ಹೆಚ್ಚಿನ ಫಲವತ್ತತೆ ದರಗಳು ಮತ್ತು ಜನಸಂಖ್ಯಾ ಪರಿವರ್ತನೆಯಲ್ಲಿ ಹಿಂದುಳಿದಿರುವ ಬಿಹಾರ ಮತ್ತು ಉತ್ತರ ಪ್ರದೇಶಗಳಂತಹ ರಾಜ್ಯಗಳಲ್ಲಿ 2021 ಮತ್ತು 2036ರ ನಡುವೆ ಜನಸಂಖ್ಯೆಯಲ್ಲಿ ವಯಸ್ಸಾದವರ ಪಾಲು ಹೆಚ್ಚುವ ನಿರೀಕ್ಷೆಯಿದೆ, ಆದರೂ ಈ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಿರಲಿದೆ ಎಂದು ತಿಳಿಸಿದೆ.

2021ರ ಜನಗಣತಿ ಅಂದಾಜುಗಳಂತೆ ಭಾರತದಲ್ಲಿ ಪ್ರತಿ ನೂರು ಮಕ್ಕಳಿಗೆ 39 ವಯಸ್ಸಾದ ವ್ಯಕ್ತಿಗಳಿದ್ದಾರೆ ಎಂದು ವರದಿಯು ಹೇಳಿದೆ.

ಜನಸಂಖ್ಯೆಯಲ್ಲಿ ವಯಸ್ಸಾದವರ ಹೆಚ್ಚಿನ ಪಾಲನ್ನು ಹೊಂದಿರುವ ರಾಜ್ಯಗಳು ( ಉದಾಹರಣೆಗೆ ದಕ್ಷಿಣ ಭಾರತ) ವಯಸ್ಸಾಗುವಿಕೆ ಸೂಚ್ಯಂಕಕ್ಕೆ ಹೆಚ್ಚಿನ ಅಂಕವನ್ನು ತೋರಿಸುತ್ತಿವೆ,ಇದು ಫಲವತ್ತತೆಯಲ್ಲಿ ಕುಸಿತವನ್ನು ಮತ್ತು ತನ್ಮೂಲಕ ಮಕ್ಕಳಿಗೆ ಹೋಲಿಸಿದರೆ ವಯಸ್ಸಾದವರ ಸಂಖ್ಯೆ ಹೆಚ್ಚುತ್ತಿರುವುದನ್ನು ಸೂಚಿಸುತ್ತಿದೆ.

ವಯಸ್ಸಾಗುವಿಕೆ ಸೂಚ್ಯಂಕದಂತೆ ದಕ್ಷಿಣ ಮತ್ತು ಪಶ್ಚಿಮ ಭಾರತಕ್ಕೆ ಹೋಲಿಸಿದರೆ ಮಧ್ಯ ಮತ್ತು ಈಶಾನ್ಯ ಪ್ರದೇಶಗಳು ಹೆಚ್ಚಿನ ಯುವಜನರನ್ನು ಹೊಂದಿವೆ ಎಂದು ವರದಿಯು ಹೇಳಿದೆ.

2021ರಲ್ಲಿ ಪ್ರದೇಶಗಳಾದ್ಯಂತ ಗಮನಾರ್ಹ ಏರಿಳಿತಗಳೊಂದಿಗೆ ಪ್ರತಿ ನೂರು ದುಡಿಯುವ ವಯಸ್ಸಿನ ವ್ಯಕ್ತಿಗಳಿಗೆ 16 ವಯಸ್ಸಾದವರು ಇದ್ದರು ಎಂದು ಜನಸಂಖ್ಯಾ ಅಂದಾಜುಗಳು ಸೂಚಿಸುತ್ತಿವೆ ಎಂದು ವರದಿಯು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News