ಜಿ-20 ವಿಶ್ವದ ಅತ್ಯಂತ ಶಕ್ತಿಶಾಲಿ ವೇದಿಕೆಯಾಗಲು ಭಾರತದ ಅಧ್ಯಕ್ಷತೆಯು ನೆರವಾಗಿದೆ: ಅಮಿತಾಬ್ ಕಾಂತ್

Update: 2023-09-22 12:11 GMT

ಅಮಿತಾಬ್ ಕಾಂತ್

ಹೊಸದಿಲ್ಲಿ: ಇತ್ತೀಚೆಗೆ ಮುಕ್ತಾಯಗೊಂಡ ಜಿ-20 ಶೃಂಗಸಭೆಯ ಹೊಸದಿಲ್ಲಿ ನಾಯಕರ ಘೋಷಣೆಯಲ್ಲಿ ಭೌಗೋಳಿಕ-ರಾಜಕೀಯ ವಿಷಯಗಳಲ್ಲಿ ಒಮ್ಮತವನ್ನು ಗಳಿಸುವ ಮೂಲಕ, ಭಾರತವು ಪ್ರಬಲ ಬಹುಪಕ್ಷೀಯ ಸಂಧಾನಕಾರ ಎಂದು ಸಾಬೀತುಪಡಿಸಿದೆ ಎಂದು ಜಿ-20 ಶೆರ್ಪಾ ಅಮಿತಾಬ್ ಕಾಂತ್ ಹೇಳಿದ್ದಾರೆ.

ಹೊಸದಿಲ್ಲಿಯಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ಶೆರ್ಪಾ "ಯಾವುದೇ ಹಿಂಜರಿಕೆ, ಯಾವುದೇ ಟಿಪ್ಪಣಿ, ಯಾವುದೇ ವ್ಯತಿರಿಕ್ತ ಹೇಳಿಕೆಯಿಲ್ಲದೇ 100 ಪ್ರತಿಶತ ಒಮ್ಮತದ ದಾಖಲೆಯನ್ನು ಪಡೆದಿರುವುದು ಬಹುಪಕ್ಷೀಯ ವೇದಿಕೆಗಳ ಇತಿಹಾಸದಲ್ಲಿ ಅಭೂತಪೂರ್ವವಾದುದು" ಎಂದು ಅವರು ಹೇಳಿದರು.

ನಾಯಕರ ಶೃಂಗಸಭೆಯಲ್ಲಿ ಅಂಗೀಕರಿಸಲಾದ ಜಿ-20 ಘೋಷಣೆಯ ಕುರಿತು ಒಮ್ಮತವನ್ನು ಮೂಡಿಸಲು ಭಾರತೀಯ ರಾಜತಾಂತ್ರಿಕರ ತಂಡವು 200 ಗಂಟೆಗಳಿಗೂ ಹೆಚ್ಚು ತಡೆರಹಿತ ಮಾತುಕತೆಗಳನ್ನು ನಡೆಸಿತು ಎಂದು ಅಮಿತಾಬ್ ಕಾಂತ್ ಹೇಳಿದರು.

ಈ ಪ್ರಕ್ರಿಯೆಯ ಒಳನೋಟವನ್ನು ನೀಡಿದ ಅವರು, "ಯಾವುದೇ ಸಚಿವರ ಸಭೆಗಳು ಒಮ್ಮತಕ್ಕೆ ಕಾರಣವಾಗದ ಕಾರಣ ಮತ್ತು ಅವೆಲ್ಲವೂ ಅಡಿ ಟಿಪ್ಪಣಿಗಳನ್ನು ಹೊಂದಿದ್ದರಿಂದ, ಅಂತಾರಾಷ್ಟ್ರೀಯ ಮಾಧ್ಯಮಗಳು ಹೊಸದಿಲ್ಲಿ ಶೃಂಗಸಭೆಯ ಫಲಿತಾಂಶದ ಬಗ್ಗೆ ಆರಂಭದಲ್ಲಿ ಸಾಕಷ್ಟು ಸಂಶಯ ವ್ಯಕ್ತಪಡಿಸಿದ್ದವು" ಎಂದು ಹೇಳಿದರು.

"ಹೊಸದಿಲ್ಲಿಯಿಂದ ಸುಮಾರು 60 ಕಿಮೀ ದೂರದಲ್ಲಿರುವ ಮನೇಸರ್ ನಲ್ಲಿ ನಡೆದ ಮಾತುಕತೆಗಳು ತೀವ್ರವಾಗಿದ್ದವು. ಮೊದಲಿನಿಂದಲೂ ವಿಭಜಿತ ಜಿ-20 ಸ್ವೀಕಾರಾರ್ಹವಲ್ಲ ಎಂಬುದು ನಮ್ಮ ನಿಲುವಾಗಿತ್ತು. ರಷ್ಯಾ ಮತ್ತು ಜಿ7 ಹಲವಾರು ವಿಷಯಗಳನ್ನು ಸೇರಿಸಲು ಬಯಸಿದ್ದರಿಂದ ಘೋಷಣೆಯ ಸ್ವೀಕಾರದ ಓಟವು ಅನೇಕ ಏರಿಳಿತಗಳನ್ನು ಕಂಡಿತು” ಎಂದು ಅವರು ಹೇಳಿದರು. "ಆದರೆ ಬ್ರೆಝಿಲ್, ದಕ್ಷಿಣ ಆಫ್ರಿಕಾ ಮತ್ತು ನಂತರ ಇಂಡೋನೇಷ್ಯಾದಂತಹ ಅಭಿವೃದ್ಧಿಶೀಲ ರಾಷ್ಟ್ರಗಳ ಶೆರ್ಪಾಗಳು ಒಮ್ಮತ ಮೂಡಿಸುವಲ್ಲಿ ಭಾರತದೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ನಂತರ ಸೌದಿ ಅರೇಬಿಯಾ, ಮೆಕ್ಸಿಕೋ, ಅರ್ಜೆಂಟೀನಾ, ಟರ್ಕಿಯ ಶೆರ್ಪಾಗಳು ನಮ್ಮೊಂದಿಗೆ ಒಮ್ಮತಕ್ಕೆ ಬಂದರು" ಎಂದು ಅವರು ಹೇಳಿದರು.

“ಈ ಸಮಯದಲ್ಲಿ, ನಾವು ಎಲ್ಲಾ ಜಿ-20 ಮತ್ತು ಆಹ್ವಾನಿತ ದೇಶಗಳ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡು ಅನೇಕ ಕರಡುಗಳನ್ನು ತಯಾರಿಸಿದೆವು. ಎನ್ ಡಿ ಎಲ್ ಡಿ (ಹೊಸದಿಲ್ಲಿ ನಾಯಕರ ಘೋಷಣೆ) ಯನ್ನು ಎಲ್ಲರನ್ನೂ ಒಳಗೊಂಡ, ಮಹತ್ವಾಕಾಂಕ್ಷೆಯ, ನಿರ್ಣಾಯಕ ಮತ್ತು ಕಾರ್ಯ-ಆಧಾರಿತವಾಗಿಸುವ ನಮ್ಮ ಬದ್ಧತೆಯಲ್ಲಿ ನಾವು ದೃಢವಾಗಿದ್ದೆವು”ಎಂದು ಕಾಂತ್ ಹೇಳಿದರು.

ಜಿ-20 ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ಬಹುಪಕ್ಷೀಯ ವೇದಿಕೆಯಾಗಬಲ್ಲದು, ವಿಶ್ವಸಂಸ್ಥೆಗಿಂತಲೂ ಹೆಚ್ಚು ಶಕ್ತಿಶಾಲಿಯಾಗಬಲ್ಲುದು ಎಂಬುದನ್ನು ಭಾರತದ ಅಧ್ಯಕ್ಷತೆಯು ಪ್ರದರ್ಶಿಸಿದೆ ಎಂದು ಶೆರ್ಪಾ ಹೇಳಿದರು. ಜಿ-20 ರಾಷ್ಟ್ರಗಳು ವಿಶ್ವದ ಜನಸಂಖ್ಯೆಯ ಶೇ.65 ರಷ್ಟನ್ನು ಪ್ರತಿನಿಧಿಸುತ್ತವೆ ಮತ್ತು ಪ್ರಪಂಚದ ಜಿಡಿಪಿಯ ಶೇ.85 ರಷ್ಟನ್ನು ಹೊಂದಿವೆ.

ಪ್ರಮುಖ ಅಂಶಗಳು

ಜಿ-20 ನಾಯಕರ ಘೋಷಣೆಯು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿಶ್ವ ದೃಷ್ಟಿಕೋನವಾದ - ಮಹಿಳಾ ನೇತೃತ್ವದ ಅಭಿವೃದ್ಧಿ, ಮಾನವ-ಕೇಂದ್ರಿತ ಪ್ರಗತಿ, ಲೈಫ್ ಉಪಕ್ರಮ, ಒಳಗೊಳ್ಳುವಿಕೆ ಮತ್ತು ಕಾರ್ಯ-ಆಧಾರಿತ ಫಲಿತಾಂಶಗಳ ಶಾಶ್ವತವಾದ ಮುದ್ರೆಯನ್ನು ಹೊಂದಿದೆ ಎಂದು ಅಮಿತಾಬ್ ಕಾಂತ್ ಹೇಳಿದರು. ಆಫ್ರಿಕನ್ ಒಕ್ಕೂಟದ ಸೇರ್ಪಡೆ ಮತ್ತು ಘೋಷಣೆಯು ಭಾರತವನ್ನು ಜಾಗತಿಕ ದಕ್ಷಿಣದ ಚಾಂಪಿಯನ್ ಆಗಿಸಿವೆ.

ಭಾರತದ ಜಿ-20 ಅಧ್ಯಕ್ಷತೆಯು ಒಟ್ಟು 112 ಫಲಿತಾಂಶಗಳನ್ನು ಕಂಡಿದೆ ಎಂದು ಶೆರ್ಪಾ ಮಾಹಿತಿ ನೀಡಿದರು. ಇದು ಇಂಡೋನೇಷ್ಯಾ ಅಧ್ಯಕ್ಷತೆಯ ಅವಧಿಗಿಂತ ಎರಡು ಪಟ್ಟು ಹೆಚ್ಚು ಫಲಿತಾಂಶಗಳನ್ನು ಹೊಂದಿದೆ. ಇಂಡೋನೇಷ್ಯಾ 2022 ರಲ್ಲಿ 50 ಮತ್ತು ಇಟಲಿ 2021 ರಲ್ಲಿ 65 ಫಲಿತಾಂಶಗಳನ್ನು ಹೊಂದಿದ್ದರೆ, ಹಿಂದಿನ ಅಧ್ಯಕ್ಷತೆಗಳ ಫಲಿತಾಂಶಗಳು 20 -30 ರ ನಡುವೆ ಇದ್ದವು.

ಭಾರತದ ಅಧ್ಯಕ್ಷತೆ ವಿಶೇಷವಾದದ್ದು

ಭಾರತದ ಜಿ-20 ಅಧ್ಯಕ್ಷತೆಯನ್ನು ಅದು ಪ್ರಸ್ತುತಪಡಿಸಿದ ವೈವಿಧ್ಯತೆಗಾಗಿ ಸದಾ ನೆನಪಿಸಿಕೊಳ್ಳಲಾಗುತ್ತದೆ ಎಂದು ಶೆರ್ಪಾ ಹೇಳಿದರು. “ನಮ್ಮ ಜಿ-20 ಅಧ್ಯಕ್ಷ ಸ್ಥಾನವು ನಾಲ್ಕು ಗೋಡೆಗಳೊಳಗಿನ ಸಭೆಗಳಿಗೆ ಸೀಮಿತವಾಗಲಿಲ್ಲ. ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವನ್ನು ಒಳಗೊಂಡ 60 ನಗರಗಳಲ್ಲಿ ನಡೆದ 220 ಕ್ಕೂ ಹೆಚ್ಚು ಸಭೆಗಳಲ್ಲಿ ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯನ್ನು ತುಂಬಲಾಯಿತು” ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News