ತೆರೆಮರೆಗೆ ಸರಿಯಲಿದೆ ಭಾರತದ ʼಕೂʼ ಆ್ಯಪ್‌

Update: 2024-07-03 09:45 GMT

ಹೊಸದಿಲ್ಲಿ: ಟ್ವಿಟರ್‌ಗೆ ಪರ್ಯಾಯವಾಗಿ ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿದ್ದ ʼಕೂʼ ಸಾಮಾಜಿಕ ಜಾಲತಾಣ ತೆರೆಮರೆಗೆ ಸರಿಯಲಿದೆ. ಅದರ ಸ್ಥಾಪಕರಾದ ಅಪ್ರಮೇಯ ರಾಧಾಕೃಷ್ಣ ಮತ್ತು ಮಾಯಾಂಕ್‌ ಬಿದವಟ್ಕ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ.

ಪಾಲುದಾರಿಕೆ ಮಾತುಕತೆಗಳಲ್ಲಿ ವೈಫಲ್ಯ ಮತ್ತು ತಂತ್ರಜ್ಞಾನದ ಅಧಿಕ ವೆಚ್ಚಗಳ ಕಾರಣ ಮುಂದೊಡ್ಡಿ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ. ಕಂಪೆನಿ ಎಪ್ರಿಲ್‌ 2023ರಿಂದಲೇ ತನ್ನ ಸಾಕಷ್ಟು ಉದ್ಯೋಗಿಗಳನ್ನು ಕೆಲಸದಿಂದ ಕೈಬಿಡುವ ನಿರ್ಧಾರ ಕೈಗೊಂಡಿತ್ತು.

ಪ್ರಾರಂಭದಲ್ಲಿ ಜನಪ್ರಿಯತೆ ಪಡೆದಿದ್ದ ʼಕೂʼ ದಿನಂಪ್ರತಿ 21 ಲಕ್ಷ ಸಕ್ರಿಯ ಬಳಕೆದಾರರನ್ನು ಹಾಗೂ 1 ಕೋಟಿ ಮಾಸಿಕ ಬಳಕೆದಾರರನ್ನು ಹೊಂದಿತ್ತು. ಆದರೆ ಆರ್ಥಿಕ ಸವಾಲುಗಳು ಇದೀಗ ಕಂಪನಿಯ ಮುಚ್ಚುಗಡೆಗೆ ಕಾರಣವಾಗುತ್ತಿದೆ.

ಕಂಪನಿಯ ಕೆಲವೊಂದು ಸ್ವತ್ತುಗಳನ್ನು ಮಾರಾಟ ಮಾಡುವುದಾಗಿಯೂ ಅದರ ಸ್ಥಾಪಕರು ಹೇಳಿದ್ದಾರೆ.

ಟ್ವಿಟರ್‌ನ ನೀಲಿ ಹಕ್ಕಿಗೆ ಪರ್ಯಾಯವಾಗಿ ʼಕೂʼ ಆ್ಯಪ್‌ ಪುಟ್ಟ ಹಳದಿ ಬಣ್ಣದ ಹಕ್ಕಿಯ ಚಿತ್ರ ಹೊಂದಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News