246 ವೈದ್ಯಕೀಯ ಕಾಲೇಜುಗಳಲ್ಲಿ ಸಾಕಷ್ಟು ಬೋದಕ ಸಿಬ್ಬಂದಿ ಇಲ್ಲ: ಎನ್ಎಂಸಿ ಪರಿಶೀಲನೆಯಲ್ಲಿ ಬಹಿರಂಗ
ಹೊಸದಿಲ್ಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ)ದ ಪದವಿ ಶಿಕ್ಷಣ ಮಂಡಳಿ (ಯುಜಿಎಂಇಬಿ) ನಡೆಸಿದ 246 ವೈದ್ಯಕೀಯ ಕಾಲೇಜುಗಳ ವೌಲ್ಯಮಾಪನದಲ್ಲಿ ಯಾವುದೇ ವೈದ್ಯಕೀಯ ಕಾಲೇಜು ಸಾಕಷ್ಟು ಬೋಧಕ ಸಿಬ್ಬಂದಿಯನ್ನು ಹೊಂದಿಲ್ಲ ಹಾಗೂ ಶೇ. 50 ಹಾಜರಾತಿ ಅಗತ್ಯತೆಯನ್ನು ಪೂರೈಸಿಲ್ಲ ಎಂಬುದು ಕಂಡುಬಂದಿದೆ.
2022-23ನೇ ಶೈಕ್ಷಣಿಕ ವರ್ಷದಲ್ಲಿ ಈ ವೌಲ್ಯಮಾಪನ ಮಾಡಲಾಗಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗ ನಿಗದಿಪಡಿಸಿದ ನಿಯಮ ಹಾಗೂ ಮಾನದಂಡಗಳನ್ನು ಪೂರೈಸಲು ವಿಫಲವಾದ ವೈದ್ಯಕೀಯ ಕಾಲೇಜುಗಳಿಗೆ 1 ಕೋ.ರೂ. ದಂಡ ವಿಧಿಸುವ ನಿಯಮವನ್ನು ಎನ್ಎಂಸಿ ಇತ್ತೀಚೆಗೆ ಅನುಷ್ಠಾನಕ್ಕೆ ತಂದಿತ್ತು. ಆದರೆ, ಈ ಎಲ್ಲಾ ಕಾಲೇಜುಗಳಿಗೆ ಎನ್ಎಂಸಿ ಅನುಮತಿ ನೀಡಿರುವುದು ಯಾಕೆ? ಎಂದು ಈಗ ವೈದ್ಯಕೀಯ ಶಿಕ್ಷಣ ತಜ್ಞರು ಪ್ರಶ್ನಿಸುತ್ತಿದ್ದಾರೆ.
‘‘ಸಾಮಾನ್ಯ ಜನರ ಆರೋಗ್ಯ ಸುರಕ್ಷೆಯ ದೃಷ್ಟಿಯಿಂದ ವೈದ್ಯಕೀಯ ಶಿಕ್ಷಣದಲ್ಲಿ ಗುಣಮಟ್ಟ ನಿರ್ವಹಣೆ ಮುಖ್ಯವಾಗಿದೆ. ಕೇವಲ ರಾಜಕೀಯ ಉದ್ದೇಶಕ್ಕಾಗಿ ವಿವೇಚನ ಇಲ್ಲದೆ ನೂತನ ಕಾಲೇಜುಗಳನ್ನು ತೆರೆಯುವುದರಿಂದ ಯಾವುದೇ ರೀತಿಯ ಪ್ರಯೋಜನವಾಗದು’’ ಎಂದು ಭಾರತೀಯ ವೈದ್ಯಕೀಯ ಸಂಘಟನೆ (ಐಎಂಎ)ಯ ಮಾಜಿ ಅಧ್ಯಕ್ಷ ರವಿ ವಾಂಖೇಡ್ಕರ್ ತಿಳಿಸಿದ್ದಾರೆ. ಮಾನದಂಡಗಳನ್ನು ಅನುಸರಿಸದೇ ಇರುವುದು ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮಾಡುವ ವಂಚನೆಗೆ ಸಮಾನವಾದುದು ಎಂದು ಹೇಳಿರುವ ಇನೋರ್ವ ತಜ್ಞರು, ಕಾಲೇಜು ಆರಂಭವಾದ ಬಳಿಕ ಅಲ್ಲಿ ಶಿಕ್ಷಕರು ಇಲ್ಲದೇ ಇರುವುದು ಹೇಗೆ ಗಮನಕ್ಕೆ ಬರುತ್ತದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನಿಸಿದ್ದಾರೆ.
‘‘ಈ ಕಾಲೇಜುಗಳನ್ನು ಆರಂಭಿಸಲು ಅನುಮತಿ ಹೇಗೆ ನೀಡಲಾಯಿತು?’’ ಎಂದು ಕೂಡ ಅವರು ಪ್ರಶ್ನಿಸಿದ್ದಾರೆ. ‘‘ತುರ್ತು ವೈದ್ಯಕೀಯ ವಿಭಾಗಕ್ಕೆ ಯಾವೊಬ್ಬ ವಿದ್ಯಾರ್ಥಿ ಕೂಡ ದಿನನಿತ್ಯ ಹೋಗುತ್ತಿಲ್ಲ ಎಂಬುದನ್ನು ನಾವು ಕಂಡು ಕೊಂಡಿದ್ದೇವೆ. ಯಾಕೆಂದರೆ, ಈ ವಿಭಾಗದಲ್ಲಿ ತುರ್ತು ವೈದ್ಯಕೀಯ ಅಧಿಕಾರಿ ಹೊರತುಪಡಿಸಿದರೆ, ಅವರೊಂದಿಗೆ ಸಂವಹನ ನಡೆಸಲು ಯಾರೊಬ್ಬರು ಕೂಡ ಇಲ್ಲ. ತುರ್ತು ವೈದ್ಯಕೀಯ ವಿಭಾಗಕ್ಕೆ ನಿಯೋಜಿಸುವುದೆಂದರೆ ವಿದ್ಯಾರ್ಥಿಗಳಿಗೆ ಅದು ವಿರಾಮದ ಅವಧಿ ಎಂದರ್ಥ’’ ಎಂದು ಎನ್ಎಂಸಿ ಅಸೋಸಿಯೇಶನ್ ಆಫ್ ಎಮರ್ಜೆನ್ಸಿ ಫಿಶಿಸಿಯನ್ ಆಫ್ ಇಂಡಿಯಾ (ಎಇಪಿಐ)ಗೆ ಸಲ್ಲಿಸಿದ ಪತ್ರದಲ್ಲಿ ಹೇಳಿದೆ.
ಇತ್ತೀಚೆಗೆ ಎನ್ಎಂಸಿ 134 ಕಾಲೇಜುಗಳಲ್ಲಿ ತುರ್ತು ವೈದ್ಯಕೀಯ ವಿಭಾಗಗಳು ಕಾಗದದಲ್ಲಿ ಮಾತ್ರ ಇವೆ. ಇದು ವಾಸ್ತವದ ಸ್ಥಿತಿ ಎಂದು ಕೂಡ ಎಇಪಿಐಗೆ ಮಾಹಿತಿ ನೀಡಿತ್ತು.