ವಿಮಾ ಮೊತ್ತ ವಂಚನೆ, ಹತ್ಯೆ ಪ್ರಕರಣ: 17 ವರ್ಷದ ಬಳಿಕ ಆರೋಪಿಯ ಬಂಧನ

Update: 2024-06-29 04:26 GMT

ಆಗ್ರಾ: ವಿಮಾ ವಂಚನೆ ಪ್ರಕರಣವೊಂದರಲ್ಲಿ 60 ಲಕ್ಷ ರೂಪಾಯಿ ಪಡೆಯುವ ಸಲುವಾಗಿ ಭಿಕ್ಷುಕನೊಬ್ಬನನ್ನು ಕೊಂದ ಪ್ರಕರಣದಲ್ಲಿ 17 ವರ್ಷಗಳ ಬಳಿಕ ಆರೋಪಿಯನ್ನು ಬಂಧಿಸುವಲ್ಲಿ ಇಲ್ಲಿನ ಜಿ.ಬಿ.ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ವ್ಯಕ್ತಿಯನ್ನು ರಾಮವೀರ ಸಿಂಗ್ (62) ಎಂದು ಗುರುತಿಸಲಾಗಿದೆ.

ಆಗ್ರಾ ಕೋಟೆಯ ಬಳಿ 2006ರ ಜುಲೈ 30ರಂದು ಕಾರು ಅಪಘಾತಕ್ಕೀಡಾಗಿದ್ದು, ಬೆಂಕಿ ಹತ್ತಿಕೊಂಡು ಚಾಲಕ ಸಜೀವ ದಹನವಾಗಿದ್ದ. ವಿಜಯಪಾಲ್ ಸಿಂಗ್ ಎಂಬಾತನ ಮಗ ಅನಿಲ್ ಸಿಂಗ್ ಎಂಬಾತನ ಹೆಸರಲ್ಲಿ ಈ ವಾಹನ ನೋಂದಣಿಯಾಗಿತ್ತು. ಇದು ಅನಿಲ್ ಸಿಂಗ್ ನ ಮೃತದೇಹ ಎಂದು ವಿಜಯಪಾಲ್ ಅವರ ಆಪ್ತ ಸ್ನೇಹಿತ ರಾಮವೀರ ಸಿಂಗ್ ಕೂಡ ಪತ್ತೆ ಮಾಡಿದ್ದ.

ಆದರೆ ತನಿಖೆ ಬಳಿಕ ಇದು ವಿಮಾ ಹಣವನ್ನು ಪಡೆಯಲು ಮಾಡಿದ ನಾಟಕ ಎನ್ನುವುದು ಪೊಲೀಸರಿಗೆ ತಿಳಿದು ಬಂತು. ಭಿಕ್ಷುಕನೊಬ್ಬನಿಗೆ ಅನಿಲ್ ಸಿಂಗ್ ನ ಬಟ್ಟೆಯನ್ನು ತೊಡಿಸಿ ಕಾರಿನಲ್ಲಿ ಆತನನ್ನು ಸಜೀವವಾಗಿ ದಹಿಸಲಾಗಿದೆ ಎಂದು ತನಿಖೆಯಿಂದ ಗೊತ್ತಾಯಿತು. ಅಹ್ಮದಾಬಾದ್ ನ ಅಪರಾಧ ವಿಭಾಗದ ಪೊಲೀಸರು ಈ ಪ್ರಕರಣವನ್ನು ಬೇಧಿಸಿ, ಮೃತಪಟ್ಟಿದ್ದಾನೆ ಎನ್ನಲಾದ ಮುಖ್ಯ ಆರೋಪಿ ಅನಿಲ್ನನ್ನು ಬಂಧಿಸಿದರು. ಅನಿಲ್ ತನ್ನದೇ ಮರಣ ಪ್ರಮಾಣಪತ್ರವನ್ನು ಪಡೆದು 60 ಲಕ್ಷ ರೂಪಾಯಿ ವಿಮಾ ಮೊತ್ತವನ್ನು ಕ್ಲೇಮ್ ಮಾಡಿದ್ದ ಎಂದು ಪೊಲೀಸರು ವಿವರಿಸಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ರಾಮವೀರ ಸಿಂಗ್ ನನ್ನು ಶುಕ್ರವಾರ ಬಂಧಿಸಲಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News