ಅದಾನಿ ವಿರುದ್ಧದ ಆರೋಪದ ತನಿಖೆ | ಸೆಬಿ ಮುಖ್ಯಸ್ಥೆ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಮುಷ್ಕರ

Update: 2024-08-22 15:04 GMT

PC : PTI 

ಹೊಸದಿಲ್ಲಿ : ಮಾರುಕಟ್ಟೆ ನಿಯಂತ್ರಕ ಸೆಬಿ ಹಾಗೂ ಅದಾನಿ ಸಮೂಹದ ವಿರುದ್ಧದ ಆರೋಪಗಳ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ನಡೆಸುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ದೇಶದ ವಿವಿಧ ಭಾಗಗಳಲ್ಲಿ ಮುಷ್ಕರ ನಡೆಸಿದರು.

ವಿದೇಶಗಳಲ್ಲಿರುವ ಫಂಡ್‌ಗಳಲ್ಲಿ ಬುಚ್ ಹಾಗೂ ಅವರ ಪತಿ ಹೂಡಿಕೆ ಮಾಡಿದ್ದಾರೆ. ಇದೇ ಫಂಡ್ ಅನ್ನು ಅದಾನಿ ಸಮೂಹ ಭಾರತಕ್ಕೆ ವಾಪಸ್ ತಂದು ತನ್ನ ಸಮೂಹದ ಕಂಪೆನಿಗಳಲ್ಲಿ ಹೂಡಿಕೆ ಮಾಡಿದೆ ಎಂದು ಹಿಂಡೆನ್‌ಬರ್ಗ್ ರಿಸರ್ಚ್ ವರದಿ ಬಹಿರಂಗಗೊಳಿಸಿದ ಬಳಿಕ ಸೆಬಿ ಮುಖ್ಯಸ್ಥೆ ಮಾಧಬಿ ಬುಚ್ ರಾಜೀನಾಮೆ ನೀಡಬೇಕು ಎಂದು ಕೂಡ ಕಾಂಗ್ರೆಸ್ ಆಗ್ರಹಿಸಿದೆ.

ತೆಲಂಗಾಣದಲ್ಲಿ ಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ವರಿಷ್ಠ ಎ. ರೇವಂತ್ ರೆಡ್ಡಿ, ಅವರ ಸಂಪುಟ ಸಹೋದ್ಯೋಗಿಗಳು ಹಾಗೂ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಸೇರಿದಂತೆ ಪಕ್ಷದ ಶಾಸಕರು ಹಾಗೂ ಹಿರಿಯ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

‘‘ಸತ್ಯ ಗೆಲ್ಲಲಿದೆ’’ ಎಂಬ ಪ್ರದರ್ಶನಾ ಫಲಕ ಹಿಡಿದುಕೊಂಡು ಹಾಗೂ ಘೋಷಣೆಗಳನ್ನು ಕೂಗುತ್ತಾ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ನಾಯಕರು ಹಾಗೂ ಕಾರ್ಯಕರ್ತರು ಗುನ್ ಉದ್ಯಾನವನದಿಂದ ಜಾರಿ ನಿರ್ದೇಶನಾಲಯ (ಈಡಿ)ದ ಕಚೇರಿ ವರೆಗೆ ರ‍್ಯಾಲಿ ನಡೆಸಿದರು. ಅನಂತರ ಜಾರಿ ನಿರ್ದೇಶನಾಲಯದ ಕಚೇರಿ ಮುಂದೆ ನಡೆದ ಧರಣಿಯಲ್ಲಿ ಪಾಲ್ಗೊಂಡರು.

‘‘ಸೆಬಿ ಅಧ್ಯಕ್ಷೆ ರಾಜೀನಾಮೆ ನೀಡುವಂತೆ ಹಾಗೂ ಅದಾನಿಯ ಭಾರೀ ಹಗರಣದ ಬಗ್ಗೆ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ ರೂಪಿಸುವಂತೆ ನಾವು ಆಗ್ರಹಿಸುತ್ತೇವೆ’’ ಎಂದು ಅವರು ಹೇಳಿದ್ದಾರೆ.

ಹೊಸದಿಲ್ಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ದಿಲ್ಲಿಯ ಕಾಂಗ್ರೆಸ್ ಮುಖ್ಯಸ್ಥ ದೇವೇಂದರ್ ಯಾದವ್, ಹಿರಿಯ ನಾಯಕ ಸಚಿನ್ ಪೈಲಟ್, ಕನ್ಹಯ್ಯ ಕುಮಾರ್, ಉದಿತ್ ರಾಜ್ ಹಾಗೂ ಇತರರು ಪಾಲ್ಗೊಂಡರು.

‘‘ನೀವು ಯಾವುದೇ ತಪ್ಪೆಸಗದೇ ಇದ್ದರೆ, ಜಂಟಿ ಸಂಸದೀಯ ಸಮಿತಿಯನ್ನು ಯಾಕೆ ರೂಪಿಸುತ್ತಿಲ್ಲ? ಇಡೀ ದೇಶ ಇದನ್ನು ಕೇಳಬೇಕು ಹಾಗೂ ಕಾಂಗ್ರೆಸ್ ಮಾತ್ರ ಜಂಟಿ ಸಂಸದೀಯ ಸಮಿತಿ ಮೂಲಕ ನ್ಯಾಯಯುತ ಹಾಗೂ ಪಾರದರ್ಶಕ ತನಿಖೆ ನಡೆಸಬೇಕೆಂದು ಆಗ್ರಹಿಸುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’’ ಎಂದು ಸಚಿನ್ ಪೈಲಟ್ ತಿಳಿಸಿದ್ದಾರೆ.

ಅದಾನಿ ಸಮೂಹದ ವಿರುದ್ಧ ಶೇರುಗಳ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಲಾಗಿದೆ ಹಾಗೂ ಲೆಕ್ಕಪತ್ರದಲ್ಲಿ ವಂಚನೆ ಎಸಗಲಾಗಿದೆ ಎಂದು ಆರೋಪಿಸಿ ಹಿಂಡನ್‌ಬರ್ಗ್ 2023 ಜನವರಿಯಲ್ಲಿ ವರದಿ ಬಿಡುಗಡೆ ಮಾಡದ ಬಳಿಕ ಈ ವಿಷಯದ ಕುರಿತಂತೆ ಪಾರದರ್ಶಕ ತನಿಖೆ ನಡೆಸುವಂತೆ ಕಾಂಗ್ರೆಸ್ ಆಗ್ರಹಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News