ಎಂಎಸ್ಪಿಗೆ ಕಾನೂನು ಖಾತರಿ ನೀಡಲು ಆಧ್ಯಾದೇಶ ಜಾರಿಗೊಳಿಸಿ: ರೈತ ನಾಯಕ ಸರವಣ ಸಿಂಗ್ ಪಂಡೇರ್
ಹೊಸದಿಲ್ಲಿ: ಪ್ರಸಕ್ತ ಪಂಜಾಬ್-ಹರ್ಯಾಣ ಗಡಿಯ ಶಂಭು ಹಾಗೂ ಖನೌರಿ ಕೇಂದ್ರಗಳಲ್ಲಿ ಮೊಕ್ಕಾಂ ಹೂಡಿರುವ ರೈತರ ಪ್ರಮುಖ ಬೇಡಿಕೆಯಾದ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ನೀಡುವ ಕುರಿತು ಕೇಂದ್ರ ಸರಕಾರ ಆಧ್ಯಾದೇಶ ಜಾರಿಗೆ ತರಬೇಕು ಎಂದು ರೈತ ನಾಯಕ ಸರವಣ ಸಿಂಗ್ ಪಂಡೇರ್ ಆಗ್ರಹಿಸಿದ್ದಾರೆ.
ತಮ್ಮ ವಿವಿಧ ಬೇಡಿಕೆಗಳ ಕುರಿತಂತೆ ರೈತ ನಾಯಕರು ಹಾಗೂ ಕೇಂದ್ರ ಸಚಿವರ ನಡುವಿನ ನಾಲ್ಕನೇ ಸುತ್ತಿನ ಮಾತುಕತೆಯ ಒಂದು ದಿನ ಮೊದಲು ಅವರು ಈ ಬೇಡಿಕೆ ಮುಂದಿಟ್ಟಿದ್ದಾರೆ.
‘‘ಕೇಂದ್ರ ಸರಕಾರ ಬಯಸಿದರೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಖಾತರಿ ನೀಡುವ ಕುರಿತು ಆಧ್ಯಾದೇಶವನ್ನು ತತ್ಕ್ಷಣ ಜಾರಿಗೆ ತರಬಹುದು. ಅನಂತರ ಚರ್ಚೆ ಮುಂದುವರಿಸಬಹುದು. ಯಾವುದೇ ಆಧ್ಯಾದೇಶ 6 ತಿಂಗಳು ಸಿಂಧುತ್ವ ಹೊಂದಿದೆ’’ ಎಂದು ಪಂಡೇರ್ ಅವರು ತಿಳಿಸಿದ್ದಾರೆ.
ಕೃಷಿ ಸಾಲ ಮನ್ನಾ ಕುರಿತು ಪ್ರತಿಕ್ರಿಯಿಸಿದ ಪಂಡೇರ್, ಸಾಲದ ಮೊತ್ತವನ್ನು ಅಂದಾಜಿಸಬೇಕಾಗಿದೆ ಎಂದು ಸರಕಾರ ಹೇಳುತ್ತಿದೆ. ಇದಕ್ಕೆ ಸಂಬಂಧಿಸಿ ಸರಕಾರ ಬ್ಯಾಂಕ್ಗಳಿಂದ ದತ್ತಾಂಶವನ್ನು ಸಂಗ್ರಹಿಸಬಹುದು. ಇದು ಅದರ ಇಚ್ಛಾಶಕ್ತಿಗೆ ಸಂಬಂಧಿಸಿದ ಪ್ರಶ್ನೆ ಎಂದರು.
ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಪಿಯೂಷ್ ಗೋಯಲ್ ಹಾಗೂ ನಿತ್ಯಾನಂದ ರಾಯ್ ಅವರನ್ನು ರೈತ ನಾಯಕರು ನಾಲ್ಕನೇ ಸುತ್ತಿನ ಮಾತುಕತೆಗಾಗಿ ರವಿವಾರ ಭೇಟಿಯಾಗಲಿದ್ದಾರೆ.
ಸಚಿವರು ಹಾಗೂ ರೈತರ ನಡುವೆ ಈ ಹಿಂದೆ ಫೆಬ್ರವರಿ 8, 12 ಹಾಗೂ 15ರಂದು ಮಾತುಕತೆ ನಡೆದಿತ್ತು. ಆದರೆ, ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ.