ಕನ್ವರ್‌ ಯಾತ್ರೆ ಮಾರ್ಗದಲ್ಲಿರುವ ಎಲ್ಲಾ ಆಹಾರ ಮಳಿಗೆಗಳ, ಹೋಟೆಲ್‌ಗಳ ಮಾಲಕರ ಹೆಸರು ಪ್ರದರ್ಶಿಸುವುದು ಕಡ್ಡಾಯ: ವಿರೋಧದ ನಡುವೆಯೂ ಸಿಎಂ ಆದಿತ್ಯನಾಥ್‌ ಆದೇಶ

Update: 2024-07-19 08:51 GMT

ಆದಿತ್ಯನಾಥ್‌ | PTI 

ಲಕ್ನೋ: ಕನ್ವರ್‌ ಯಾತ್ರೆಯ ಮಾರ್ಗದುದ್ದಕ್ಕೂ ಇರುವ ಎಲ್ಲ ಹೋಟೆಲ್‌ಗಳು ಹಾಗೂ ಆಹಾರ ಸ್ಟಾಲ್‌ಗಳ ಮಾಲಕರು ತಮ್ಮ ಹೆಸರುಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌ ಇಂದು ಆದೇಶ ಹೊರಡಿಸಿದ್ದಾರೆ.

ಇಂತಹುದೇ ಸೂಚನೆಯನ್ನು ಮುಝಫ್ಫರನಗರ ಪೊಲೀಸರು ಈ ಹಿಂದೆ ನೀಡಿದ್ದರೂ ವಿಪಕ್ಷಗಳಿಂದ ಬಂದ ಟೀಕೆಗಳ ಹಿನ್ನೆಲೆಯಲ್ಲಿ ಮಾಲಕರು ಐಚ್ಚಿಕವಾಗಿ ತಮ್ಮ ಹೆಸರುಗಳನ್ನು ಪ್ರದರ್ಶಿಸಬಹುದು ಎಂದು ಸೂಚಿಸಿದ್ದರು.

ಆದರೆ ಇಂದು ಸಿಎಂ ಅವರಿಂದಲೇ ಆದೇಶ ಹೊರಬಿದ್ದಿದೆ. ಈ ಆದೇಶದ ಪ್ರಕಾರ ಕನ್ವರ್‌ ಮಾರ್ಗದಲ್ಲಿರುವ ಪ್ರತಿಯೊಂದು ಹೋಟೆಲ್‌, ಆಹಾರ ತಳ್ಳುಗಾಡಿ, ಢಾಬಾಗಳ ಮಾಲಕರು ತಮ್ಮ ಹೆಸರು ಪ್ರದರ್ಶಿಸುವುದು ಕಡ್ಡಾಯವಾಗಿದೆ. ಇದು ಕನ್ವರ್‌ ಯಾತ್ರಾರ್ಥಿಗಳ ಪಾವಿತ್ರ್ಯ ಕಾಪಾಡಲು ಕೈಗೊಂಡ ಕ್ರಮ ಎಂದು ಸಿಎಂ ಯೋಗಿ ಆದಿತ್ಯನಾಥ್‌ ತಿಳಿಸಿದ್ದಾರೆ.

ಹಿಂದು ಹೆಸರುಗಳನ್ನು ಮುಂದಿಟ್ಟುಕೊಂಡು ಮುಸ್ಲಿಮರು ತೀರ್ಥಯಾತ್ರಿಗಳಿಗೆ ಮಾಂಸಾಹಾರ ಒದಗಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶ ಸಚಿವ ಕಪಿಲ್‌ ದೇವ್‌ ಅಗರ್ವಾಲ್‌ ಇಂದು ಆರೋಪಿಸಿದ್ದರು. “ಅವರು ವೈಷ್ಣೋ ಧಾಬಾ ಭಂಡಾರ್‌, ಶಕುಂಭರಿ ದೇವಿ ಭೋಜನಾಲಯ ಮತ್ತು ಶುದ್ಧ ಭೋಜನಾಲಯ ಎಂಬ ಹೆಸರುಗಳನ್ನಿಟ್ಟು ನಂತರ ಮಾಂಸಾಹಾರ ಮಾರಾಟ ಮಾಡುತ್ತಾರೆ,” ಎಂದು ಸಚಿವರು ಹೇಳಿದ್ದರು.

ಉತ್ತರಾಖಂಡ ಪೊಲೀಸರೂ ಕನ್ವರ್‌ ಯಾತ್ರೆ ಮಾರ್ಗದಲ್ಲಿರುವ ಎಲ್ಲಾ ಆಹಾರ ಮಳಿಗೆಗಳ ಮಾಲಕರಿಗೆ ಅವರ ಹೆಸರುಗಳನ್ನು ಪ್ರದರ್ಶಿಸುವಂತೆ ಆದೇಶಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News