ಜಮ್ಮು-ಕಾಶ್ಮೀರದ ಎಲ್ಲ ಶಾಲೆಗಳಲ್ಲಿ ಬೆಳಗ್ಗೆ ರಾಷ್ಟ್ರಗೀತೆ ಹಾಡುವುದು ಕಡ್ಡಾಯ

Update: 2024-06-13 16:13 GMT

ಸಾಂದರ್ಭಿಕ ಚಿತ್ರ |  PC : NDTV 

 

ಶ್ರೀನಗರ : ಜಮ್ಮು-ಕಾಶ್ಮೀರ ಶಿಕ್ಷಣ ಇಲಾಖೆಯು ಬೆಳಗಿನ ತರಗತಿಗಳ ಆರಂಭಕ್ಕೆ ಮುನ್ನ ವಿದ್ಯಾರ್ಥಿಗಳಿಂದ ಸಾಮೂಹಿಕವಾಗಿ ರಾಷ್ಟ್ರಗೀತೆಯನ್ನು ಹಾಡಿಸುವುದನ್ನು ಕಡ್ಡಾಯಗೊಳಿಸಿ ಎಲ್ಲ ಶಾಲೆಗಳಿಗೆ ಗುರುವಾರ ಸುತ್ತೋಲೆಯನ್ನು ಹೊರಡಿಸಿದೆ.

ಪ್ರಮಾಣಿತ ಶಿಷ್ಟಾಚಾರಗಳ ಪ್ರಕಾರ ಬೆಳಗಿನ ವಿದ್ಯಾರ್ಥಿಗಳ ಸಮಾವೇಶವು ಸಾಮೂಹಿಕ ರಾಷ್ಟ್ರಗೀತೆಯೊಂದಿಗೆ ಆರಂಭಗೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಶಾಲೆಗಳಲ್ಲಿ ಬೆಳಗಿನ ಸಮಾವೇಶಗಳು ವಿದ್ಯಾರ್ಥಿಗಳಲ್ಲಿ ಏಕತೆಯ ಪ್ರಜ್ಞೆ ಮತ್ತು ಶಿಸ್ತನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇವು ನೈತಿಕ ಸಮಗ್ರತೆ, ಸಹಬಾಳ್ವೆ ಮತ್ತು ಮಾನಸಿಕ ನೆಮ್ಮದಿಯ ಮೌಲ್ಯಗಳನ್ನು ಪೋಷಿಸುವ ವೇದಿಕೆಗಳಾಗಿ ಕಾರ್ಯ ನಿರ್ವಹಿಸುತ್ತವೆ. ಆದರೆ ಜಮ್ಮು-ಕಾಶ್ಮೀರದಲ್ಲಿಯ ವಿವಿಧ ಶಾಲೆಗಳಾದ್ಯಂತ ಇಂತಹ ಮಹತ್ವದ ಆಚರಣೆ/ಸಂಪ್ರದಾಯ ಏಕರೂಪವಾಗಿ ನಡೆಯುತ್ತಿಲ್ಲ ಎನ್ನುವುದು ಕಂಡುಬಂದಿದೆ ಎಂದು ಹೇಳಿರುವ ಇಲಾಖೆಯು, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಮೈಗೂಡಿಸಲು ಇತರ ವಿಷಯಗಳ ಜೊತೆಗೆ ಪರಿಸರ ಮತ್ತು ವಿದ್ಯಾರ್ಥಿಗಳ ಸಾಧನೆಗಳ ಕುರಿತು ಚರ್ಚೆಗಳನ್ನು ಆಯೋಜಿಸುವಂತೆ ಶಾಲೆಗಳಿಗೆ ಸೂಚಿಸಲಾಗಿದೆ.

ಸುತ್ತೋಲೆಯು ಸ್ವಾತಂತ್ರ ಹೋರಾಟಗಾರರ ಆತ್ಮಚರಿತ್ರೆಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚಿಸುವಂತೆ ಮತ್ತು ಅವರನ್ನು ಪ್ರೇರೇಪಿಸಲು ಅವರೊಂದಿಗೆ ಸ್ಫೂರ್ತಿದಾಯಕ ಸಂವಾದಗಳನ್ನು ನಡೆಸುವಂತೆ ಶಿಕ್ಷಕರಿಗೂ ಸೂಚಿಸಿದೆ.

ಜಮ್ಮು-ಕಾಶ್ಮೀರದಲ್ಲಿ ರವಿವಾರದಿಂದ ನಾಲ್ಕು ಭಯೋತ್ಪಾದಕ ದಾಳಿಗಳು ನಡೆದಿರುವ ಹಿನ್ನೆಲೆಯಲ್ಲಿ ಈ ಸುತ್ತೋಲೆಯು ಹೊರಬಿದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News