ಹರ್ಯಾಣ ವಿಧಾನಸಭಾ ಚುನಾವಣೆ: ಮತಯಂತ್ರ ತಿರುಚಲಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ದನಿಗೂಡಿಸಿದ ಜಗನ್ ರೆಡ್ಡಿ

Update: 2024-10-10 08:31 GMT

ಜಗನ್ ಮೋಹನ್ ರೆಡ್ಡಿ (Photo: PTI)

ಹೊಸದಿಲ್ಲಿ: ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಮತಯಂತ್ರಗಳನ್ನು ತಿರುಚಲಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ದನಿಗೂಡಿಸಿರುವ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ, ಚುನಾವಣೆಗಳ ಬಗ್ಗೆ ವಿಶ್ವಾಸಾರ್ಹತೆಯನ್ನು ಮೂಡಿಸಲು ಮತ ಪತ್ರಗಳ ಚುನಾವಣಾ ಪ್ರಕ್ರಿಯೆಯನ್ನು ಮರಳಿ ಪರಿಚಯಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.

ಹರ್ಯಾಣದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಚುನಾವಣೋತ್ತರ ಸಮೀಕ್ಷೆಗಳ ಅಂದಾಜನ್ನು ಹುಸಿಗೊಳಿಸಿದ ಫಲಿತಾಂಶವನ್ನು ಉಲ್ಲೇಖಿಸಿದ ಅವರು, ಜನಪ್ರಿಯ ಅನಿಸಿಕೆಯನ್ನು ಬುಡಮೇಲಾಗಿಸಿದ ಮತ್ತೊಂದು ಚುನಾವಣೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಜಗನ್ ಮೋಹನ್ ರೆಡ್ಡಿ, “ಹರ್ಯಾಣ ಚುನಾವಣಾ ಫಲಿತಾಂಶವು ನ್ಯಾಯಾಲಯಗಳಲ್ಲಿ ಪ್ರಕರಣಗಳು ಬಾಕಿ ಇರುವ ಆಂಧ್ರಪ್ರದೇಶದ ಚುನಾವಣಾ ಫಲಿತಾಂಶಕ್ಕಿಂತ ಭಿನ್ನವಾಗಿಲ್ಲ. ನಮ್ಮಂತಹ ಪ್ರಜಾಪ್ರಭುತ್ವದಲ್ಲಿ ಪ್ರಜಾಪ್ರಭುತ್ವವು ಕೇವಲ ಪ್ರಸ್ತುತ ಮಾತ್ರ ಆಗಿರಬಾರದು, ಪ್ರವರ್ಧಮಾನಕ್ಕೂ ಬರಬೇಕು. ಈ ಎರಡನ್ನೂ ಖಾತರಿಪಡಿಸಲು ಮತ ಪತ್ರಗಳಿಗೆ ಮರಳಬೇಕಿದೆ” ಎಂದು ಬರೆದುಕೊಂಡಿದ್ದಾರೆ.

ಮತದಾರರ ವಿಶ್ವಾಸವನ್ನು ವೃದ್ಧಿಸಲು ಅಭಿವೃದ್ಧಿ ಶೀಲ ದೇಶಗಳ ಸಾಲಿನಲ್ಲಿರುವ ಭಾರತವು ಮತ ಪತ್ರಗಳನ್ನು ಬಳಸಬೇಕು ಎಂದೂ ಅವರು ಕರೆ ನೀಡಿದ್ದಾರೆ. 

ಹರ್ಯಾಣ ಮತ್ತು ಆಂಧ್ರಪ್ರದೇಶ ಚುನಾವಣಾ ಫಲಿತಾಂಶಗಳ ನಡುವೆ ಸಾಮ್ಯತೆಯನ್ನು ಪ್ರತಿಪಾದಿಸಿರುವ ಜಗನ್ ಮೋಹನ್ ರೆಡ್ಡಿ, ಫಲಿತಾಂಶಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ ಲೋಕಸಭಾ ಚುನಾವಣೆಯೊಂದಿಗೇ ನಡೆದಿದ್ದ 175 ಸದಸ್ಯ ಬಲದ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷವು ಕೇವಲ 11 ಸ್ಥಾನಗಳನ್ನು ಗಳಿಸುವ ಮೂಲಕ ದಯನೀಯವಾಗಿ ಪರಾಭವಗೊಂಡಿತ್ತು. ಈ ಹಿನ್ನೆಲೆಯಲ್ಲಿ ಜಗನ್ ಮೋಹನ್ ರೆಡ್ಡಿ ಹೇಳಿಕೆ ಮಹತ್ವ ಪಡೆದುಕೊಂಡಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News