ಕೆನಡಾ ವಿದೇಶಾಂಗ ಸಚಿವರ ಜತೆ ಜೈಶಂಕರ್ ರಹಸ್ಯ ಭೇಟಿ
ಹೊಸದಿಲ್ಲಿ: ಭಾರತದಲ್ಲಿರುವ ಕೆನಡಾ ರಾಜತಾಂತ್ರಿಕ ಸಿಬ್ಬಂದಿ ಗಾತ್ರವನ್ನು ಕಡಿತಗೊಳಿಸುವ ಪ್ರಕ್ರಿಯೆ ಇನ್ನೂ ಅಪೂರ್ಣವಾಗಿದ್ದು, ತಾನು ದೆಹಲಿಯಲ್ಲಿ ಬಯಸುವ ಗಾತ್ರವನ್ನು ಭಾರತೀಯ ಮಿಷನ್ ಗೆ ಕೆನಡಾದಲ್ಲಿ ನೀಡಲು ಆ ದೇಶ ಹಿಂದೇಟು ಹಾಕುತ್ತಿದೆ.
ಈ ವಿಧಿವಿಧಾನಗಳ ಚರ್ಚೆ ನಡೆಯುತ್ತಿರುವಂತೆಯೇ ಭಾರತದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಜೈಶಂಕರ್ ಅವರು ಕೆನಡಾ ವಿದೇಶಾಂಗ ಸಚಿವರನ್ನು ರಹಸ್ಯವಾಗಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ವಾಷಿಂಗ್ಟನ್ ನಿಂದ ಫೈನಾನ್ಶಿಯಲ್ ಟೈಮ್ಸ್ ಮಾಡಿರುವ ವರದಿಯ ಪ್ರಕಾರ, ಜೈಶಂಕರ್ ಮತ್ತು ಮೆಲನೀ ಜೋಲಿ ನಡುವಿನ ಈ ರಹಸ್ಯ ಮಾತುಕತೆ ಅಮೆರಿಕದ ರಾಜಧಾನಿಯಲ್ಲಿ ನಡೆದಿದೆ. ಕೆನಡಾದ ರಾಜತಾಂತ್ರಿಕ ಬಲವನ್ನು ರದ್ದುಪಡಿಸುವ ಎಚ್ಚರಿಕೆಯನ್ನು ಭಾರತ ನೀಡಿದ್ದರೂ, ಕೆಲ ರಾಜತಾಂತ್ರಿಕ ಸಿಬ್ಬಂದಿ ಅವಧಿ ಮೀರಿ ವಾಸವಿದ್ದಾರೆ ಎಂಬ ವರದಿಗಳನ್ನು ಭಾರತ ಅಲ್ಲಗಳೆದಿಲ್ಲ.
ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಪಾತ್ರ ವಹಿಸಿದೆ ಎಂದು ಕೆನಡಾ ಆರೋಪ ಮಾಡಿದ ಹಿನ್ನೆಲೆಯಲ್ಲಿ, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿತ್ತು.
ಈ ಪ್ರಕರಣದ ತನಿಖೆಯಲ್ಲಿ ಭಾರತ ಕೆನಡಾ ಜತೆ ಕೈಜೋಡಿಸಬೇಕು ಎಂದು ಅಮೆರಿಕ ಅಭಿಪ್ರಾಯಪಟ್ಟಿದ್ದು, ಈ ಬಗ್ಗೆ ಮಾತುಕತೆಯ ವೇಳೆ ಚರ್ಚೆ ನಡೆದಿದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಇನ್ನೊಂದು ಮಹತ್ವದ ಬೆಳವಣಿಗೆಯೆಂದರೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ, ಭಾರತ ಹಾಗೂ ಪಾಕಿಸ್ತಾನದ ನಡುವಿನ ಖಲಿಸ್ತಾನಿ ಪ್ರಕರಣವನ್ನು ಯುಎಇ ಹಾಗೂ ಜೋರ್ಡಾನ್ ಜತೆ ದೂರವಾಣಿ ಮಾತುಕತೆ ನಡೆಸಿ ಕೆದಕುತ್ತಲೇ ಇದ್ದಾರೆ.
ನಿಜ್ಜರ್ ಪ್ರಕರಣದ ತನಿಖೆಯ ವಿಚಾರದಲ್ಲಿ ಕೆನಡಾ ಭಾರತದ ಜತೆ ಖಾಸಗಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಜೋಲಿ ಹೇಳಿಕೆ ನೀಡಿದ್ದು, ಈ ಹತ್ಯೆ ಪ್ರಕರಣದ ಬಗ್ಗೆ ತನಿಖೆ ನಡೆಸಲು ಭಾರತದ ಮೇಲೆ ಇತರ ದೇಶಗಳಿಂದ ಒತ್ತಡ ಹೇರುವ ನಿಟ್ಟಿನಲ್ಲಿ ಕೆನಡಾ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸುತ್ತಿದೆ.