ಜಮ್ಮುಕಾಶ್ಮೀರ | ಸೇನಾ ಸಿಬ್ಬಂದಿಯಿಂದ ಥಳಿತ ; ನಾಲ್ವರು ಪೊಲೀಸ್ ಅಧಿಕಾರಿಗಳಿಗೆ ಗಂಭೀರ ಗಾಯ
ಶ್ರೀನಗರ: ಜಮ್ಮು ಹಾಗೂ ಕಾಶ್ಮೀರದ ಕುಪ್ವಾರದಲ್ಲಿ ಸೇನಾ ಸಿಬ್ಬಂದಿ ನಾಲ್ವರು ಪೊಲೀಸ್ ಅಧಿಕಾರಿಗಳಿಗೆ ಥಳಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಸೇನಾ ಸಿಬ್ಬಂದಿ ಹಾಗೂ ಪೊಲೀಸರ ನಡುವೆ ಮಂಗಳವಾರ ತಡ ರಾತ್ರಿ ನಡೆದ ಘರ್ಷಣೆಯಲ್ಲಿ ವಿಶೇಷ ಪೊಲೀಸ್ ಅಧಿಕಾರಿಗಳಾದ ರಯೀಸ್ ಖಾನ್, ಇಮ್ತಿಯಾಝ್ ಮಲಿಕ್ ಹಾಗೂ ಕಾನ್ಸ್ಟೇಬಲ್ ಗಳಾದ ಸಲೀಮ್ ಮುಸ್ತಾಕ್, ಝಹೂರ್ ಅಹ್ಮದ್ ಗಾಯಗೊಂಡಿದ್ದಾರೆ. ಇವರು ಸೌರಾದಲ್ಲಿರುವ ಎಸ್ಕೆಐಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಸೇನೆಯ ತಂಡ ಕುಪ್ವಾರ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿತು. ಇವರ ನಡುವಿನ ಘರ್ಷಣೆಗೆ ನಿಖರವಾದ ಕಾರಣ ಏನು ಎಂಬುದನ್ನು ಪೊಲೀಸರಾಗಲಿ, ಸೇನೆಯಾಗಲಿ ಬಹಿರಂಗಪಡಿಸಿಲ್ಲ.
ಪ್ರಕರಣವೊಂದರ ತನಿಖೆಯ ಭಾಗವಾಗಿ ಬಾಟ್ಪೋರಾದಲ್ಲಿರುವ ಸ್ಥಳೀಯ ಪ್ರಾದೇಶಿಕ ಸೇನಾಧಿಕಾರಿಯ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಇದರಿಂದ ಆಕ್ರೋಶಗೊಂಡ ಸೇನಾ ಸಿಬ್ಬಂದಿ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸ್ ಅಧಿಕಾರಿಗಳಿಗೆ ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪೊಲೀಸರು ಹಾಗೂ ಸೇನಾ ಸಿಬ್ಬಂದಿ ನಡುವಿನ ಘರ್ಷಣೆಯನ್ನು ಶ್ರೀನಗರದ ರಕ್ಷಣಾ ವಕ್ತಾರ ನಿರಾಕರಿಸಿದ್ದಾರೆ. ಈ ಸುದ್ದಿ ಸುಳ್ಳು ಎಂದು ಅವರು ಹೇಳಿದ್ದಾರೆ.