ಅ. 1ರಂದು ‘ಮೋದಿ ಹಾಗೂ ಕಂಪೆನಿ’ಗೆ ಜಮ್ಮು ಕಾಶ್ಮೀರದ ಯುವಜನತೆ ಬಾಗಿಲು ತೋರಿಸಲಿದ್ದಾರೆ : ಮಲ್ಲಿಕಾರ್ಜುನ ಖರ್ಗೆ
ಹೊಸದಿಲ್ಲಿ : ಜಮ್ಮು ಹಾಗೂ ಕಾಶ್ಮೀರದ ಯುವಜನತೆಗೆ ಮುಂಬರುವ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಂಪೆನಿಗೆ ಬಾಗಿಲು ತೋರಿಸಲಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವಿವಾರ ಹೇಳಿದ್ದಾರೆ.
ತನ್ನ ‘ಎಕ್ಸ್’ನ ಪೋಸ್ಟ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಜಮ್ಮು ಹಾಗೂ ಕಾಶ್ಮೀರದಲ್ಲಿ ಮಾರ್ಚ್‌ನಲ್ಲಿ ಯುವ ನಿರುದ್ಯೋಗದ ದರ ಶೇ. 28.2 ಇತ್ತು ಎಂದರು.
‘‘ಹಲವು ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳ ಸೋರಿಕೆ, ಲಂಚ ಹಾಗೂ ವ್ಯಾಪಕ ಭ್ರಷ್ಟಾಚಾರದಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಇಲಾಖೆಗಳಲ್ಲಿ ನೇಮಕಾತಿಯಾಗಿಲ್ಲ. ಜಮ್ಮು ಹಾಗೂ ಕಾಶ್ಮೀರದ ಸರಕಾರಿ ಇಲಾಖೆಗಳಲ್ಲಿ 2019ರಿಂದ ಶೇ. 65ರಷ್ಟು ಹುದ್ದೆಗಳು ಖಾಲಿ ಇವೆ’’ ಎಂದು ಅವರು ಹೇಳಿದರು.
ಜಮ್ಮು ಹಾಗೂ ಕಾಶ್ಮೀರದಲ್ಲಿ 60 ಸಾವಿರಕ್ಕೂ ಅಧಿಕ ಸರಕಾರಿ ದಿನಕೂಲಿ ನೌಕರರು ಕಳೆದ 15 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅವರು ದಿನಕ್ಕೆ ಅತಿ ಕಡಿಮೆ 300 ರೂ. ವೇತನ ಗಳಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ವಿದ್ಯುತ್, ಸಾರ್ವಜನಿಕ ಆರೋಗ್ಯ ಹಾಗೂ ಎಂಜಿನಿಯರಿಂಗ್‌ನಂತಹ ಅತ್ಯಗತ್ಯದ ಇಲಾಖೆಗಳಲ್ಲಿ ಸುದೀರ್ಘ ಸೇವೆಯ ಹೊರತಾಗಿಯೂ ಅವರು ಗುತ್ತಿಗೆ ಕಾರ್ಮಿಕರಾಗಿಯೇ ಉಳಿದುಕೊಂಡಿದ್ದಾರೆ. ಇದು ಉದ್ಯೋಗ ಬಿಕ್ಕಟ್ಟಿನ ಸ್ವರೂಪದ ಮೇಲೆ ಬೆಳಕು ಚೆಲ್ಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಜಮ್ಮು ಹಾಗೂ ಕಾಶ್ಮೀರದಲ್ಲಿ ಕೈಗಾರಿಕೆಗಳನ್ನು ಆರಂಭಿಸಲಾಗುವುದು ಎಂದು ಬಿಜೆಪಿ ಭರವಸೆ ನೀಡಿದ ಹೊರತಾಗಿಯೂ ಅಲ್ಲಿ ಪ್ರಮುಖ ಉತ್ಪಾದನಾ ಘಟಕಗಳನ್ನು ಇದುವರೆಗೆ ಸ್ಥಾಪಿಸಿಲ್ಲ. ಖಾಸಗಿ ವಲಯ ಕೃಷಿ, ಆತಿಥ್ಯ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಸೇವೆಗಳನ್ನು ಪೂರೈಸುವಲ್ಲಿ ಸೀಮಿತವಾಗಿದೆ ಎಂದು ಅವರು ಹೇಳಿದರು.
ಅಕ್ಟೋಬರ್ 1ರಂದು ಜಮ್ಮು ಹಾಗೂ ಕಾಶ್ಮೀರದ ಯುವ ಜನತೆ ಮೋದಿ ಹಾಗೂ ಕಂಪೆನಿಗೆ ಬಾಗಿಲು ತೋರಿಸಲಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
90 ಸದಸ್ಯರ ಜಮ್ಮು ಹಾಗೂ ಕಾಶ್ಮೀರ ವಿಧಾನ ಸಭೆಗೆ ಸೆಪ್ಟಂಬರ್ 18, 25 ಹಾಗೂ ಅಕ್ಟೋಬರ್ 1ರಂದು ಮೂರು ಹಂತಗಳಲ್ಲಿ ಮತದಾನ ನಡೆಯಿಲಿದೆ. ಅಕ್ಟೋಬರ್ 8ರಂದು ಫಲಿತಾಂಶ ಘೋಷಣೆಯಾಗಲಿದೆ.