ಜಮ್ಮು ಕಾಶ್ಮೀರ | ರಾಜ್ಯ ಸ್ಥಾನಮಾನ ಸ್ಥಾಪನೆಯ ತನಕ ಸರಕಾರ ರಚಿಸಬೇಡಿ : ಎಐಪಿ ನಾಯಕ ಎಂಜಿನಿಯರ್ ರಶೀದ್ ಕರೆ

Update: 2024-10-08 14:43 GMT

ಎಂಜಿನಿಯರ್ ರಶೀದ್ | PTI 

ಶ್ರೀನಗರ : ರಾಜ್ಯದ ಸ್ಥಾನಮಾನ ಮರುಸ್ಥಾಪನೆಯಾಗುವವರೆಗೂ ಜಮ್ಮು ಕಾಶ್ಮೀರದಲ್ಲಿ ಸರಕಾರ ರಚನೆಗೆ ಮುಂದಾಗಬಾರದೆಂದು ಅವಾಮಿ ಇತ್ತೆಹಾದ್ ಪಾರ್ಟಿ( ಎಐಪಿ)ಯ ಅಧ್ಯಕ್ಷ ಹಾಗೂ ಉತ್ತರ ಕಾಶ್ಮೀರದ ಲೋಕಸಭಾ ಸದಸ್ಯ ಎಂಜಿನಿಯರ್ ರಶೀದ್ ಅವರು ಜಮ್ಮು ಕಾಶ್ಮೀರದ ರಾಜಕೀಯ ಪಕ್ಷಗಳಿಗೆ ಕರೆ ನೀಡಿದ್ದಾರೆ.

ಶ್ರೀನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಮ್ಮುಕಾಶ್ಮೀರದ ಜನರ ಘನತೆ ಹಾಗೂ ಹಕ್ಕುಗಳನ್ನು ರಕ್ಷಿಸಲು ಅದರ ರಾಜ್ಯದ ಸ್ಥಾನಮಾನ ಮರುಸ್ಥಾಪಿಸುವುದು ಅತ್ಯಂತ ಮುಖ್ಯವಾದುದಾಗಿದೆ. ಆದುದರಿಂದ ರಾಜ್ಯದ ಸ್ಥಾನಮಾನ ಮರುಸ್ಥಾಪನೆಯಾಗುವವರೆಗೂ ಸರಕಾರ ರಚಿಸದಂತೆ ನ್ಯಾಶನಲ್ ಕಾನ್ಫರೆನ್ಸ್ (ಎನ್‌ಸಿ), ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ (ಪಿಡಿಪಿ), ಪೀಪಲ್ಸ್ ಕಾನ್ಫರೆನ್ಸ್ (ಪಿಸಿ), ಆಪ್ನಿ ಪಾರ್ಟಿ, ಎಎನ್‌ಸಿ ಮತ್ತಿತರ ಪಕ್ಷಗಳಿಗೆ ತಾನು ಮನವಿ ಮಾಡುವುದಾಗಿ ಹೇಳಿದರು.

‘‘ ನಾವು ಒಗ್ಗಟ್ಟಾಗಿರಬೇಕು ಹಾಗೂ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪನೆಯನ್ನು ಮುಖ್ಯ ಕಾರ್ಯಸೂಚಿಯಾಗಿ ಹೊಂದಿರುವ ಕನಿಷ್ಠ ಸಾಮಾನ್ಯ ಕಾರ್ಯಕ್ರಮವನ್ನು ರೂಪಿಸಬೇಕಾಗಿದೆ. ಪಕ್ಷ ರಾಜಕೀಯಕ್ಕೆ ಇದು ಸಮಯವಲ್ಲ. ಸಮಾನ ಧ್ಯೇಯವನ್ನು ಸಾಧಿಸಲು ಜನತೆಗಾಗಿ ಒಟ್ಟಾಗಿ ಕೆಲಸ ಮಾಡುವ ಸಮಯ ಇದಾಗಿದೆ”, ಎಂದು ಅವರು ಹೇಳಿದ್ದಾರೆ.

ರಶೀದ್ ಅವರ ಈ ಹೇಳಿಕೆಯನ್ನು ಖಂಡಿಸಿರುವ ನ್ಯಾಶನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ ಅವರು ರಶೀದ್ ಅವರು ಬಿಜೆಪಿಯ ಕೈಗೊಂಬೆ ಎಂದು ಆಪಾದಿಸಿದ್ದಾರೆ. ‘‘ ಈ ಮನುಷ್ಯ ಪ್ರತಿ 24 ತಾಸುಗಳಿಗೊಮ್ಮೆ ದಿಲ್ಲಿಗೆ ಹೋಗುತ್ತಾರೆ ಹಾಗೂ ವಾಪಸ್ ಬಂದು ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆ’’ ಎಂದು ಉಮರ್ ‘ಎಕ್ಸ್’ನಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News