ನಿಗದಿತ ಬೆಲೆಯಲ್ಲಿ ಪುಸ್ತಕಗಳು ಲಭ್ಯವಾಗಲು ಎನ್‌ಸಿಇಆರ್‌ಟಿ-ಅಮೆಝಾನ್ ಒಪ್ಪಂದ
ಹೊಸದಿಲ್ಲಿ : ಅಮೆಝಾನ್‌ನಲ್ಲಿ ಎನ್‌ಸಿಇಆರ್‌ಟಿಯ ಮೂಲ ಪುಸ್ತಕಗಳು ನಿಗದಿತ ಬೆಲೆಯಲ್ಲಿ ಲಭ್ಯವಾಗಲು ಎನ್‌ಸಿಇಆರ್‌ಟಿ ಹಾಗೂ ಅಮೆಝಾನ್ ಸೋಮವಾರ ಒಪ್ಪಂದ ಮಾಡಿಕೊಂಡಿವೆ.
ಎನ್‌ಸಿಇಆರ್‌ಟಿಯ ಮೂಲ ಪಠ್ಯ ಪುಸ್ತಕಗಳು ಆನ್‌ಲೈನ್‌ಲ್ಲಿ ಲಭ್ಯವಾಗಲು ಇದೇ ಮೊದಲ ಬಾರಿ ಅಮೆಝಾನ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಈ ಕ್ರಮವು ಶಿಕ್ಷಣವನ್ನು ಒಳಗೊಳ್ಳುವಂತೆ, ಲಭ್ಯವಾಗುವಂತೆ ಹಾಗೂ ಕೈಗೆಟುಕುವಂತೆ ಮಾಡುವ ರಾಷ್ಟ್ರೀಯ ಶಿಕ್ಷಣ ನೀತಿ 2020ರ ದೃಷ್ಟಿಕೋನವನ್ನು ಸಶಕ್ತಗೊಳಿಸಲಿದೆ. ಒಟ್ಟು ಸುಮಾರು 220 ಕೋಟಿ ಪುಸ್ತಕಗಳು ಹಾಗೂ ನಿಯತಕಾಲಿಕಗಳೊಂದಿಗೆ ಪಠ್ಯ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಎನ್‌ಸಿಇಆರ್‌ಟಿ 1963ರಿಂದ ಭಾರತದ ಶಿಕ್ಷಣ ಕ್ಷೇತ್ರಕ್ಕೆ ರೂಪು ನೀಡುತ್ತಿದೆ. ಎನ್‌ಸಿಇಆರ್‌ಟಿ ದೇಶದ ಪ್ರಮುಖ ಚಿಂತನ ಚಿಲುಮೆ ಎಂದು ಅವರು ಹೇಳಿದ್ದಾರೆ.
ಎನ್‌ಸಿಇಆರ್‌ಟಿ ಪುಸ್ತಕ ಪ್ರಕಟಣೆಯನ್ನು ಮೂರು ಪಟ್ಟು ಹೆಚ್ಚಿಸಲಿದೆ. ಅದು ಮುಂದಿನ ಶೈಕ್ಷಣಿಕ ಅವಧಿಗೆ (2025-26) 15 ಕೋಟಿ ಪುಸ್ತಕಗಳನ್ನು ಪ್ರಕಟಿಸಲಿದೆ ಎಂದು ಪ್ರಧಾನ್ ತಿಳಿಸಿದ್ದಾರೆ.
ಎನ್‌ಸಿಆರ್‌ಟಿಇ ಪಠ್ಯಪುಸ್ತಕಗಳಲ್ಲಿ ಮುದ್ರಿಸಿದ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತಿಲ್ಲ. ಈ ವೇದಿಕೆಯಲ್ಲಿ ಎನ್‌ಸಿಆರ್‌ಟಿಯ ಮೂಲ ಪುಸ್ತಕಗಳು ಮಾತ್ರ ಮಾರಾಟವಾಗಲಿದೆ. ಆದುದರಿಂದ ಇದು ನಕಲಿ ಎನ್‌ಸಿಇಆರ್‌ಟಿ ಪಠ್ಯ ಪುಸ್ತಕಗಳ ಮಾರಾಟವನ್ನು ನಿಗ್ರಹಿಸಲಿದೆ ಎಂದು ಅವರು ಹೇಳಿದ್ದಾರೆ.
ಮೇಲ್ವಿಚಾರಣೆಗೆ ಹಾಗೂ ನಕಲಿ ಅಥವಾ ಹೆಚ್ಚಿನ ಬೆಲೆಗೆ ಪುಸ್ತಕಗಳನ್ನು ಮಾರಾಟ ಮಾಡುವ ಅನಧಿಕೃತ ಮಾರಾಟಗಾರರನ್ನು ನಿಗ್ರಹಿಸಲು ಅಮೆಝಾನ್ ನೆರವು ನೀಡಲಿದೆ ಎಂದು ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.