ಜಮ್ಮು ಕಾಶ್ಮೀರ : ಭದ್ರತಾ ಪಡೆಗಳ ಕುರಿತು ಮಾಹಿತಿಯನ್ನು ಭಯೋತ್ಪಾದಕರಿಗೆ ಸೋರಿಕೆ ಮಾಡುತ್ತಿದ್ದ ಮೂವರ ಸೆರೆ
ಶ್ರೀನಗರ: ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರೆ ತೈಬಾದೊಂದಿಗೆ ಸಂಬಂಧ ಹೊಂದಿದ್ದ ಆರೋಪದಲ್ಲಿ ಜಮ್ಮುಕಾಶ್ಮೀರದ ಬಾರಾಮುಲ್ಲಾದಲ್ಲಿ ಮೂವರನ್ನು ಬಂಧಿಸಲಾಗಿದೆ.
ಗುಪ್ತಚರ ಮಾಹಿತಿಯ ಮೇರೆಗೆ ಬಾರಾಮುಲ್ಲಾ ಪೊಲೀಸ್ ಮತ್ತು ಭದ್ರತಾ ಪಡೆಗಳು ಮೂವರು ಆರೋಪಿಗಳನ್ನು ಬಂಧಿಸಿದ್ದು, ಅವರ ಬಳಿಯಿದ್ದ ಮೂರು ಗ್ರೆನೇಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳಾದ ಖವಾಯಿಸ್ ಅಹ್ಮದ್ ವಝಾ, ಬಾಸಿತ್ ಫಯಾಝ್ ಕಾಲೂ ಮತ್ತು ಫಾಹೀಂ ಅಹ್ಮದ್ ಮಿರ್ ಅವರು ಭಯೋತ್ಪಾದಕರಿಗೆ ನೆರವಾಗುತ್ತಿದ್ದರು ಮತ್ತು ಭದ್ರತಾ ಪಡೆಗಳ ಚಲನವಲನಗಳ ಕುರಿತು ಅವರಿಗೆ ಮಾಹಿತಿಗಳನ್ನು ಒದಗಿಸುತ್ತಿದ್ದರು ಎಂದು ಪೋಲಿಸರು ತಿಳಿಸಿದರು.
ಮುಂಬರುವ ಸಂಸದೀಯ ಚುನಾವಣೆಗಳ ಹಿನ್ನೆಲೆಯಲ್ಲಿ ಬಾರಾಮುಲ್ಲಾದಲ್ಲಿ ಶಾಂತಿ ಪ್ರಕ್ರಿಯೆಗೆ ಭಂಗವನ್ನುಂಟು ಮಾಡಲು ಆರೋಪಿಗಳು ಉದ್ದೇಶಿಸಿದ್ದರು. ಅವರ ಚಟುವಟಿಕೆಗಳು ಭಾರತದ ಸಾರ್ವಭೌಮತೆಗೆ ಮತ್ತು ಸಮಗ್ರತೆಗೆ ಅಪಾಯವಾಗಿದ್ದವು ಎಂದರು.
ಆರೋಪಿಗಳ ವಿರುದ್ದ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಕಳೆದ ವರ್ಷದ ನವಂಬರ್ ನಲ್ಲಿ ಲಷ್ಕರೆ ತೈಬಾದೊಂದಿಗೆ ಗುರುತಿಸಿಕೊಂಡಿದ್ದ ನಾಲ್ವರು ಭಯೋತ್ಪಾದಕರನ್ನು ಬಾರಾಮುಲ್ಲಾ ಪೋಲಿಸರು ಬಂಧಿಸಿದ್ದರು.