ಬಿಜೆಪಿಯೊಂದಿಗೆ ಕೈಜೋಡಿಸುವ ದೇವೇಗೌಡರ ನಿರ್ಧಾರ ತಿರಸ್ಕರಿಸಿದ ಜೆಡಿಎಸ್ ಕೇರಳ ಘಟಕ
ತಿರುವನಂತಪುರ : ಬಿಜೆಪಿಯೊಂದಿಗೆ ಕೈಜೋಡಿಸುವ ತನ್ನ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ ಅವರ ನಿರ್ಧಾರವನ್ನು ಜೆಡಿಎಸ್ ನ ಕೇರಳ ಘಟಕ ಶನಿವಾರ ತಿರಸ್ಕರಿಸಿದೆ. ಅಲ್ಲದೆ, ಕೇರಳದ ಆಡಳಿತಾರೂಢ ಎಡರಂಗದೊಂದಿಗೆ ತನ್ನ ಮೈತ್ರಿ ಮುಂದುವರಿಸಲು ನಿರ್ಧರಿಸಿದೆ.
ಕೊಚ್ಚಿಯಲ್ಲಿ ನಡೆದ ಜೆಡಿಎಸ್ ನ ಕೇರಳ ಘಟಕದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ 2024ರ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಪಕ್ಷದ ವರಿಷ್ಠರ ನಿರ್ಧಾರದ ವಿರುದ್ಧ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಲಾಗಿದೆ.
‘‘ಜಾತ್ಯತೀತತೆ, ಸಮಾಜವಾದ ಹಾಗೂ ಪ್ರಜಾಪ್ರಭುತ್ವದ ನಿಲುವುಗಳಿಗೆ ಪಕ್ಷ ಬದ್ದವಾಗಿರುವುದರಿಂದ ಜೆಡಿಎಸ್ನ ಕೇರಳ ಘಟಕ ಎಡರಂಗದೊಂದಿಗಿನ ತನ್ನ ನಾಲ್ಕೂವರೆ ದಶಕಗಳ ಮೈತ್ರಿಯನ್ನು ಮುಂದುವರಿಸಲಿದೆ. ಬಿಜೆಪಿಯೊಂದಿಗೆ ಕೈಜೋಡಿಸುವ ಬಗ್ಗೆ ಪಕ್ಷದ ಸಂಘಟನಾ ಮಟ್ಟದಲ್ಲಿ ಚರ್ಚೆ ನಡೆಸಿಲ್ಲ ಅಥವಾ ನಿರ್ಧಾರ ತೆಗೆದುಕೊಂಡಿಲ್ಲ. ಬಿಜೆಪಿ ಸೇರಲು ದೇವೆಗೌಡ ಅವರು ನೀಡಿದ ಕಾರಣ ನಮಗೆ ತೃಪ್ತಿ ನೀಡಿಲ್ಲ’’ ಎಂದು ಜೆಡಿಎಸ್ನ ಕೇರಳದ ಅಧ್ಯಕ್ಷ ಹಾಗೂ ಶಾಸಕ ಮ್ಯಾಥ್ಯೂ ಟಿ. ಥಾಮಸ್ ಹೇಳಿದ್ದಾರೆ.
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಎಚ್.ಡಿ. ದೇವೇಗೌಡ ಹಾಗೂ ಅವರ ಪುತ್ರ ಎಚ್.ಡಿ. ಕುಮಾರ ಸ್ವಾಮಿ ಅವರ ನಿರ್ಧಾರದ ಹಿನ್ನೆಲೆಯಲ್ಲಿ ಎಲ್ಲರಿಗೂ ಹೊಂದಿಕೆಯಾಗುವ ವಿಧಾನದಲ್ಲಿ ಮುಂದುವರಿಯಲು ರಾಜ್ಯದ ಇತರ ಘಟಕದ ನಾಯಕರೊಂದಿಗೆ ಸಮಾಲೋಚನೆ ನಡೆಸುವ ಕಾರ್ಯವನ್ನು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಯ ಭಾಗವಾಗಿರುವ ಹಿರಿಯ ನಾಯಕರಿಗೆ ವಹಿಸಿತು.