ಜಾರ್ಖಂಡ್ | ಹೇಮಂತ್ ಸೊರೇನ್ ಸರಕಾರಕ್ಕೆ 11 ಸಚಿವರ ಸೇರ್ಪಡೆ

Update: 2024-12-05 14:34 GMT

ಹೇಮಂತ್ ಸೊರೇನ್ | PC : PTI 

ರಾಂಚಿ : ಜಾರ್ಖಂಡ್ ಮುಕ್ತಿ ಮೋರ್ಚ (ಜೆಎಮ್‌ಎಮ್) ನೇತೃತ್ವದ ಜಾರ್ಖಂಡ್ ಸರಕಾರಕ್ಕೆ ಗುರುವಾರ ಹನ್ನೊಂದು ಸಚಿವರನ್ನು ಸೇರಿಸಿಕೊಳ್ಳಲಾಯಿತು. ರಾಜ್ಯದ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್ ನವೆಂಬರ್ 28ರಂದು ಪ್ರಮಾಣವಚನ ಸ್ವೀಕರಿಸಿದ್ದರು.

ಆರು ಜೆಎಮ್‌ಎಮ್, ನಾಲ್ವರು ಕಾಂಗ್ರೆಸ್ ಮತ್ತು ಓರ್ವ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸಚಿವರಿಗೆ ರಾಜ್ಯಪಾಲ ಸಂತೋಷ್ ಗಂಗ್ವಾರ್ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣವಚನ ಬೋಧಿಸಿದರು. ಅವರು ಆರನೇ ಜಾರ್ಖಂಡ್ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಒಂಭತ್ತು ಬಾರಿಯ ಜೆಎಮ್‌ಎಮ್ ಶಾಸಕ ಸ್ಟೀಫನ್ ಮರಾಂಡಿ ಅವರಿಗೆ ಪ್ರಮಾಣವಚನವನ್ನೂ ಬೋಧಿಸಿದರು.

ಜಾರ್ಖಂಡ್ ಸರಕಾರದಲ್ಲಿ, ಮುಖ್ಯಮಂತ್ರಿ ಸೇರಿದಂತೆ ಗರಿಷ್ಠ 12 ಸಚಿವರು ಇರಬಹುದಾಗಿದೆ. ನಾಲ್ವರು ಸಚಿವರು ಮತ್ತು ಮುಖ್ಯಮಂತ್ರಿ ಪರಿಶಿಷ್ಟ ಪಂಗಡ (ಎಸ್‌ಟಿ)ಕ್ಕೆ ಸೇರಿದರೆ, ಮೂವರು ಸಚಿವರು ಇತರ ಹಿಂದುಳಿದ ವರ್ಗ (ಒಬಿಸಿ)ಗಳನ್ನು ಪ್ರತಿನಿಧಿಸುತ್ತಾರೆ. ಇಬ್ಬರು ಸಚಿವರು ಮುಸ್ಲಿಮರಾಗಿದ್ದು, ತಲಾ ಒಬ್ಬರು ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಸಾಮಾನ್ಯ ವರ್ಗಕ್ಕೆ ಸೇರಿದ್ದಾರೆ.

ಜಾರ್ಖಂಡ್‌ನಲ್ಲಿ ಕಳೆದ ತಿಂಗಳು ನಡೆದ ವಿಧಾನಸಭಾ ಚುನಾವಣೆಯಲ್ಲಿ, ಜೆಎಮ್‌ಎಮ್ ನೇತೃತ್ವದ ಇಂಡಿಯ ಮೈತ್ರಿಕೂಟವು ಅಧಿಕಾರಕ್ಕೆ ಮರಳಿದೆ. 81 ಸದಸ್ಯ ಬಲದ ವಿಧಾನಸಭೆಯಲ್ಲಿ ಜೆಎಮ್‌ಎಮ್ ಪಕ್ಷವು 34 ಸ್ಥಾನಗಳನ್ನು ಗೆದ್ದಿದೆ. ಪಕ್ಷವು ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸೇರಿದಂತೆ ಏಳು ಸ್ಥಾನಗಳನ್ನು ಪಡೆದಿದೆ.

ಹದಿನಾರು ಶಾಸಕರೊಂದಿಗೆ, ಮೈತ್ರಿಕೂಟದ ಎರಡನೇ ಅತಿ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಸಚಿವ ಸಂಪುಟದಲ್ಲಿ ನಾಲ್ಕು ಸ್ಥಾನಗಳನ್ನು ಗಳಿಸಿದೆ. ನಾಲ್ವರು ಶಾಸಕರನ್ನು ಹೊಂದಿರುವ ಆರ್‌ಜೆಡಿಗೆ ಸಚಿವ ಸಂಪುಟದಲ್ಲಿ ಒಂದು ಸ್ಥಾನವನ್ನು ನೀಡಲಾಗಿದೆ. ಇಂಡಿಯಾ ಮೈತ್ರಿಕೂಟದ ನಾಲ್ಕನೇ ಮಿತ್ರಪಕ್ಷವಾಗಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್-ಲೆನಿನಿಸ್ಟ್) ಲಿಬರೇಶನ್ ಕೂಡ ಎರಡು ಶಾಸಕರನ್ನು ಹೊಂದಿದ್ದರೂ, ಸರಕಾರದಿಂದ ಹೊರಗುಳಿದಿದೆ.

ಸಚಿವ ಸಂಪುಟದಲ್ಲಿ ಇಬ್ಬರು ಮಹಿಳಾ ಸದಸ್ಯರಿದ್ದಾರೆ. ಅವರೆಂದರೆ ದೀಪಿಕಾ ಪಾಂಡೆ ಸಿಂಗ್ ಮತ್ತು ಶಿಲ್ಪಿ ನೇಹಾ ತಿರ್ಕೆ (ಇಬ್ಬರೂ ಕಾಂಗ್ರೆಸ್‌ನವರು).

ಆರು ಮಂದಿ ಜೆಎಮ್‌ಎಮ್ ಸಚಿವರ ಪೈಕಿ, ದೀಪಕ್ ಬಿರುವ, ರಾಮದಾಸ್ ಸೊರೇನ್ ಮತ್ತು ಹಫೀಝುಲ್ ಹಸನ್ ಹಿಂದಿನ ಸರಕಾರದಲ್ಲೂ ಸಚಿವರಾಗಿದ್ದರು.

ಆರು ಬಾರಿಯ ಶಾಸಕ, 66 ವರ್ಷದ ರಾಧಾ ಕೃಷ್ಣ ಕಿಶೋರ್ ಸಚಿವ ಸಂಪುಟದ ಅತಿ ಹಿರಿಯ ಸದಸ್ಯನಾದರೆ, 31 ವರ್ಷದ ತಿರ್ಕೆ ಅತಿ ಕಿರಿಯ ಸಚಿವೆಯಾಗಿದ್ದಾರೆ. ರಾಧಾಕೃಷ್ಣ ಕಿಶೋರ್ ಸಚಿವ ಸಂಪುಟದಲ್ಲಿರುವ ಏಕೈಕ ದಲಿತ ಸಚಿವರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News