ಅದಾನಿ ಕುರಿತು ತನಿಖಾ ವರದಿ ನಡೆಸುತ್ತಿದ್ದಾಗಲೇ ಪತ್ರಕರ್ತ ಮಂಗ್ನಾಲೆಗೆ 'ಪೆಗಾಸಸ್' ದಾಳಿ!
ಹೊಸದಿಲ್ಲಿ: ʼದಿ ವಾಷಿಂಗ್ಟನ್ ಪೋಸ್ಟ್ʼನ ಇತ್ತೀಚಿನ ತನಿಖಾ ವರದಿಯ ಬಳಿಕ ಪೆಗಾಸಸ್ ಸ್ಪೈವೇರ್ ಮತ್ತೆ ಸದ್ದು ಮಾಡಿದೆ. ಭಾರತೀಯರ ಪತ್ರಕರ್ತರು ಮತ್ತು ಪ್ರತಿಪಕ್ಷ ರಾಜಕಾರಣಿಗಳ ಮೇಲೆ ಕಣ್ಗಾವಲು ಇರಿಸಲು ಪೆಗಾಸಸ್‌ನ ಬಳಕೆ ಮುಂದುವರಿದಿದೆ ಎಂದು ವರದಿಯು ದೃಢಪಡಿಸಿದೆ.
ಆರ್ಗನೈಸ್ಡ್ ಕ್ರೈಂ ಆ್ಯಂಡ್ ಕರಪ್ಶನ್ ರಿಪೋರ್ಟಿಂಗ್ ಪ್ರಾಜೆಕ್ಟ್(ಒಸಿಸಿಆರ್‌ಪಿ)ನ ಆನಂದ ಮಂಗ್ನಾಲೆ ಮತ್ತು ಸುದ್ದಿ ಜಾಲತಾಣ ದಿ ವೈರ್‌ನ ಸ್ಥಾಪಕ ಸಂಪಾದಕ ಸಿದ್ಧಾರ್ಥ ವರದರಾಜನ್ ಅವರು ಪೆಗಾಸಸ್‌ನ ಇತ್ತೀಚಿನ ದಾಳಿಗೆ ಗುರಿಯಾಗಿದ್ದ ಪತ್ರಕರ್ತರಲ್ಲಿ ಸೇರಿದ್ದಾರೆ. 2023ರಲ್ಲಿ ಅವರ ಫೋನ್‌ಗಳಲ್ಲಿ ಪೆಗಾಸಸ್ ಸ್ಪೈವೇರ್ ಸ್ಥಾಪನೆಯಾಗಿದ್ದನ್ನು ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಸೆಕ್ಯೂರಿಟಿ ಲ್ಯಾಬ್ ದೃಢಪಡಿಸಿದೆ.
ಮಂಗ್ನಾಲೆ ಮತ್ತು ಪತ್ರಕರ್ತ ರವಿ ನಾಯರ್ ಅವರು ಅದಾನಿ ಗ್ರೂಪ್ ವಿರುದ್ಧ ಅಮೆರಿಕದ ಹೂಡಿಕೆ ಸಂಸ್ಥೆ ಹಿಂಡನ್‌ಬರ್ಗ್ ರೀಸರ್ಚ್ ಮಾಡಿದ್ದ ಆರೋಪಗಳ ಕುರಿತು ಸಿದ್ಧಪಡಿಸಿದ್ದ ತನಿಖಾ ವರದಿಯು ಸಾಗರೋತ್ತರ ಅಕ್ರಮ ಹಣ ವರ್ಗಾವಣೆಯಲ್ಲಿ ಅದಾನಿ ಗ್ರೂಪ್ ಭಾಗಿಯಾಗಿತ್ತು ಎನ್ನುವುದರ ಕುರಿತು ಪುರಾವೆಗಳನ್ನು ಒದಗಿಸಿತ್ತು. ಈ ಕುರಿತು ಅದಾನಿ ಗ್ರೂಪ್‌ನ ಪ್ರತಿಕ್ರಿಯೆ ಕೋರಿ ಈ ಪತ್ರಕರ್ತರು ಪತ್ರವನ್ನು ಬರೆದಿದ್ದರು. ಅದಾನಿ ಗ್ರೂಪ್‌ನಿಂದ ಪ್ರತಿಕ್ರಿಯೆ ಕೋರಿದ 24 ಗಂಟೆಗಳಲ್ಲಿ ಮಂಗ್ನಾಲೆಯವರ ಫೋನ್ ಪೆಗಾಸಸ್ ಸೋಂಕಿಗೆ ತುತ್ತಾಗಿತ್ತು ಎನ್ನುವುದನ್ನು ಆ್ಯಮ್ನೆಸ್ಟಿ ನಡೆಸಿದ ವಿಧಿವಿಜ್ಞಾನ ವಿಶ್ಲೇಷಣೆಯು ತೋರಿಸಿದೆ.
ಪೆಗಾಸಸ್ ಸ್ಪೈವೇರ್‌ನ ಉತ್ಪಾದಕ ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್ ತಾನು ತನ್ನ ಕಣ್ಗಾವಲು ಉತ್ಪನ್ನವನ್ನು ಸರಕಾರಗಳಿಗೆ ಮಾತ್ರ ಮಾರಾಟ ಮಾಡುತ್ತಿರುವುದಾಗಿ ಈ ಹಿಂದೆ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು.
ಮಂಗ್ನಾಲೆ ಅವರು ZecOpsನಿಂದ ಎಚ್ಚರಿಕೆಯನ್ನು ಸ್ವೀಕರಿಸಿದ್ದರು. ZecOps ಭದ್ರತಾ ಬೆದರಿಕೆಯಿದ್ದಾಗ ಎಚ್ಚರಿಕೆ ನೀಡುವ ಆ್ಯಪ್ ಆಗಿದ್ದು, ಆಧುನಿಕ ಡಿಜಿಟಲ್ ಫಾರೆನ್ಸಿಕ್ಸ್‌ನ್ನು ಬಳಸುತ್ತದೆ. ಆ.೩ರಂದು ಎಚ್ಚರಿಕೆಗಳು ಬರಲು ಆರಂಭಗೊಂಡಿದ್ದು, ಮಂಗ್ನಾಲೆ ತನ್ನ ಫೋನ್‌ನ್ನು ವಿಧಿವಿಜ್ಞಾನ ವಿಶ್ಲೇಷಣೆಗಾಗಿ ಒಸಿಸಿಆರ್‌ಪಿ ಮತ್ತು ಆ್ಯಮ್ನೆಸ್ಟಿಗೆ ಒಪ್ಪಿಸಿದ್ದರು. ಅವರ ಫೋನ್ ಪೆಗಾಸಸ್ ದಾಳಿಗೆ ಸುಲಭವಾಗಿ ಗುರಿಯಾಗಿತ್ತು. ಆದರೆ ಈ ದಾಳಿಯು ಫೋನ್ ಮೇಲೆ ಹಿಡಿತವನ್ನು ಸಾಧಿಸುವಲ್ಲಿ ಯಶಸ್ವಿಯಾಗಿತ್ತೇ ಎನ್ನುವುದು ಪ್ರಸ್ತುತ ಅಸ್ಪಷ್ಟವಾಗಿದೆ ಎಂದು ವರದಿಯು ತಿಳಿಸಿದೆ.