ಸತ್ಯೇಂದ್ರ ಜೈನ್ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ

Update: 2023-09-01 15:51 GMT

 ಸತ್ಯೇಂದ್ರ ಜೈನ್ | Photo: PTI  

ಹೊಸದಿಲ್ಲಿ: ದಿಲ್ಲಿಯ ಮಾಜಿ ಸಚಿವ ಸತ್ಯೇಂದ್ರ ಜೈನ್ ಅವರು ಮಧ್ಯಂತರ ಜಾಮೀನು ವಿಸ್ತರಣೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಿ.ಕೆ. ಮಿಶ್ರಾ ಶುಕ್ರವಾರ ಹಿಂದೆ ಸರಿದಿದ್ದಾರೆ.

ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಜೈನ್ ಅವರು ಮೇ 26ರಂದು ಮಧ್ಯಂತರ ವೈದ್ಯಕೀಯ ಜಾಮೀನು ಪಡೆದಿದ್ದರು. ಅನಂತರ ಶಸ್ತ್ರಚಿಕಿತ್ಸೆಯ ನಂತರದ ಚೇತರಿಕೆಗಾಗಿ ಮಧ್ಯಂತರ ಜಾಮೀನನ್ನು ವಿಸ್ತರಿಸುವಂತೆ ಮನವಿ ಸಲ್ಲಿಸಿದ್ದರು.

ಆದರೆ, ಜೈನ್ ಅವರ ಮನವಿಯನ್ನು ವಿರೋಧಿಸಿದ ಜಾರಿ ನಿರ್ದೇಶನಾಲಯ ಶರಣಾಗುವಂತೆ ಸೂಚಿಸಿತ್ತು. ಅಲ್ಲದೇ, ಏಮ್ಸ್ ರೂಪಿಸಿದ ವೈದ್ಯಕೀಯ ಮಂಡಳಿಯಿಂದ ಪರೀಕ್ಷೆಗೆ ಒಳಪಡುವಂತೆ ನಿರ್ದೇಶಿಸಿತ್ತು. ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಹಾಗೂ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪೀಠ ಶುಕ್ರವಾರ ವಿಚಾರಣೆ ನಡೆಸಿತು. ಈ ಸಂದರ್ಭ ಪೀಠದ ಭಾಗವಾಗಿದ್ದ ನ್ಯಾಯಮೂರ್ತಿ ಪಿ.ಕೆ. ಮಿಶ್ರಾ ಅವರು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುವ ಇಂಗಿತ ವ್ಯಕ್ತಪಡಿಸಿದರು.

ನ್ಯಾಯಮೂರ್ತಿ ಬೋಪಣ್ಣ ಅವರು ನ್ಯಾಯಮೂರ್ತಿ ಪಿ.ಕೆ. ಮಿಶ್ರ ಅವರು ಸದಸ್ಯರಲ್ಲದ ಪೀಠವನ್ನು ರಚಿಸಲು ಈ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಮುಂದಿರಿಸುವಂತೆ ನಿರ್ದೇಶಿಸಿದರು.

ಸುಪ್ರೀಂ ಕೋರ್ಟ್ ಪೀಠ ದಿಲ್ಲಿಯ ಮಾಜಿ ಸಚಿವ ಸತ್ಯೇಂದ್ರ ಜೈನ್ ಅವರ ಮಧ್ಯಂತರ ಜಾಮೀನನ್ನು ಮುಂದಿನ ವಿಚಾರಣೆ ವರೆಗೆ ಮುಂದೂಡಿದೆ. ಅರ್ಜಿಯ ಮುಂದಿನ ವಿಚಾರಣೆ ಸೆಪ್ಟಂಬರ್ 12ರಂದು ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News